ಸಿಂಧನೂರು: ಕಲಿಯುಗದಲ್ಲಿ ಸರ್ವಜನಾಂಗಕ್ಕೂ ಧರ್ಮ ಕಾರ್ಯಗಳನ್ನು ಮಾಡಲು ರಾಘವೇಂದ್ರ ಸ್ವಾಮಿಗಳು ಅನುಗ್ರಹ ನೀಡುತ್ತಾರೆ. ರಾಯರು ಎಲ್ಲ ಸಮುದಾಯಗಳಿಗೂ ಗುರುಗಳು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷ ಭೀಮಸೇನಾಚಾರ್ಯ ನವಲಿ ಹೇಳಿದರು.
ನಗರದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶನಿವಾರ ವಶಿಷ್ಠಧಾಮ ಸೇವಾ ಟ್ರಸ್ಟ್‌ನ ವತಿಯಿಂದ ಮಾಸಿಕ ಕಾರ್ಯಕ್ರಮ ಹಾಗೂ ರಾಯರ ಆರಾಧನಾ ಪೂರ್ವ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಮಕ್ಕಳಿಗೆ ರಾಯರ ವೇಷಭೂಷಣ ಸ್ಪರ್ಧೆಯಲ್ಲಿ ಮಾತನಾಡಿದರು. ಸರ್ವಜನಾಂಗದವರಿಗೂ ರಾಯರು ದೇವರ ಸ್ವರೂಪದಲ್ಲಿ ಗುರುಗಳಾಗಿದ್ದಾರೆ ಎಂದರು.
ಪಂಡಿತ ವೇದಮೂರ್ತಿ ರಾಮಕೃಷ್ಣಾಚಾರ್ಯ ಗೋನವಾರ ಮಾತನಾಡಿ, ರಾಯರ ಗುರುಪದಹಾರ ಪದ್ಯವು ಮಹಿಳೆಯರು ಹಾಗೂ ಸರ್ವಜನಾಂಗದವರ ನಿತ್ಯ ಪಾರಾಯಣಕ್ಕೆ ಅನುಕೂಲವಾಗಿದೆ ಎಂದರು.
ಬ್ರಾಹ್ಮಣ ಸಮಾಜದ ಪ್ರಮುಖರಾದ ಎಂ.ಕೆ. ಗೌರಕರ್ ಹಾಗೂ ವಿಜಯಲಕ್ಷ್ಮೀ ತುರುವಿಹಾಳ ಮಾತನಾಡಿದರು. ವಶಿಷ್ಠಧಾಮ ಸೇವಾ ಟ್ರಸ್ಟ್‌ನ ಮಹಿಳಾ ಮಂಡಳಿಯ ಅಧ್ಯಕ್ಷೆ ಶೋಭಾ ನವಲಿ ಉಪಸ್ಥಿತರಿದ್ದರು. ನಿವೃತ್ತ ಹಿರಿಯ ಶಿಕ್ಷಕ ಪಾಂಡುರಂಗ ದೇಸಾಯಿ ಸ್ವಾಗತಿಸಿದರು. ಕುಮಾರಿ ಅಕ್ಷತಾ ವೆಂಕೋಬ ಭಗವದ್ಗೀತಾ ಪಾರಾಯಣ ಮಾಡಿದರು. ರೇಣುಕಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮೂರ್ತಿ ಚನ್ನಳ್ಳಿ ವಂದಿಸಿದರು.