ಬರಿದಾದ ಕೃಷ್ಣೆ- ತುಂಗೆ ಒಡಲು!

ದೇವದುರ್ಗ ತಾಲೂಕಿನ ಅಂಜಳ ಗ್ರಾಮಕ್ಕೆ ಕೃಷ್ಣಾ ನದಿಯ ಮದ್ಯ ಭಾಗದಿಂದ ನೀರು ಪೂರೈಸಲು ಜೆಸಿಬಿ ಮೂಲಕ ಕಾಲುವೆ ಮಾಡುತ್ತಿರುವುದು.
ದೇವದುರ್ಗ ತಾಲೂಕಿನ ಅಂಜಳ ಗ್ರಾಮಕ್ಕೆ ಕೃಷ್ಣಾ ನದಿಯ ಮದ್ಯ ಭಾಗದಿಂದ ನೀರು ಪೂರೈಸಲು ಜೆಸಿಬಿ ಮೂಲಕ ಕಾಲುವೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹನಿ ನೀರಿಗೂ ನದಿ ಪಾತ್ರದ ಜನ ಪರದಾಟ.
  • ಗ್ರಾಪಂಗಳಿಂದ ಕಲುಷಿತ ನೀರು ಪೂರೈಕೆ ಆರೋಪ
  • 72 ಗ್ರಾಮಗಳಿಗೆ ಹನಿ ನೀರಿಗೆ ಸಮಸ್ಯೆ
ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ರಾಜ್ಯದಲ್ಲಿ ಮುಂಗಾರು ಆರಂಭಗೊಂಡು ತಿಂಗಳುಗಳು ಕಳೆದರು ಮಳೆಯಿಲ್ಲದೆ ರೈತರು ಅಕ್ಷರಂಶಃ ಕಂಗಾಲಗಿದ್ದು, ಜಿಲ್ಲೆಯ ಜೀವನಾಡಿಗಳಾದ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಮಳೆಯಿಲ್ಲದೆ ಬತ್ತಿಹೋಗಿದ್ದು,ನದಿಗಳನ್ನೇ ನಂಬಿ ಬದುಕುತ್ತಿರುವ ನಾಡಿಪಾತ್ರದ ಸುಮಾರು 105 ಗ್ರಾಮಗಳ ಜನರು ಇದೀಗ ಕುಡಿಯುವ ನೀರಿಗಾಗಿ ತೀವ್ರ ಪರದಾಟ ನಡೆಸುತ್ತಿದ್ದಾರೆ. ಬಿಸಿಲಿನ ಬೇಗೆಯ ನಡುವೆ ಒಂದು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ಸಾಗಬೇಕಾದ ಅನಿವಾರ್ಯತೆ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.


ಮಳೆಗಾಲ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ, ಮಳೆ ಸುರಿಯದೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ವಿಶೇಷವಾಗಿ ತುಂಗಾಭದ್ರಾ ಹಾಗೂ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಹನಿ ನೀರು ಸಿಗದಂತಾಗಿದ್ದು, ನದಿಯಲ್ಲಿ ಅಲ್ಲಲ್ಲಿ ನಿಂತ ನೀರನ್ನು ಜೆಸಿಬಿ ಸಹಾಯದಿಂದ ಕಾಲುವೆ ಮಾಡಿ ದಡಕ್ಕೆ ತಂದು ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ನಿಂತ ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ.

ಹಣಕಾಸಿನ ಕೊರತೆ
ಕಳೆದ 2025 ಮಾರ್ಚ್ ತಿಂಗಳಿನಿಂದ ಪ್ರಸಕ್ತ ಸಾಲಿನ ವರೆಗೆ ಪಂಚಾಯತಿಗಳಿಗೆ 15 ನೇ ಹಣಕಾಸು ಯೋಜನೆಯ ಅನುದಾನ ಬಂದಿಲ್ಲ. ಹಾಗಾಗಿ ಪಂಚಾಯತಿ ಸಿಬ್ಬಂದಿಗೆ ಅನುದಾನವಿಲ್ಲದೆ ಖರ್ಚುವೆಚ್ಚ ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ. ಜತೆಗೆ ಕುಡಿಯುವ ನೀರು ಪೂರೈಕೆ ಮಾಡುವುದು ದೊಡ್ಡ ತಲೆನೋವಾಗಿದೆ. ನದಿಯಲ್ಲಿ ನೀರಿಲ್ಲ. ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆಗೆ ಕಳೆದ ವರ್ಷದ ಬೇಸಿಗೆಯಲ್ಲಿ ಸರಬರಾಜು ಮಾಡಿದ ಬಾಡಿಗೆ ಹಣ ಬೋರ್‌ವೆಲ್ ಮಾಲೀಕರಿಗೆ ಬಾಡಿಗೆ ನೀಡಿಲ್ಲ. ನೀರು ಕೇಲಿದರೆ ಬಾಕಿ ಹಣ ನೀಡುವಂತೆ ಕೇಳುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀರು ಪಡೆಯುವುದೇ ದೊಡ್ಡ ಚಿಂತೆಯಾಗಿದೆ.

ಕಾಟಾಚಾರದ ಸಭೆ
ಮಳೆಗಾಲ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ, ವರುಣನ ದರ್ಶನವಿಲ್ಲ. ಮೇ ತಿಂಗಳ ಕೊನೆಯಲ್ಲಿ ಸುರಿದ ಮಳೆಗೆ ರೈತರು ಹತ್ತಿ ಬಿತ್ತನೆ ಮಾಡಿದ್ದರು. ನಂತರ ಮಳೆ ಬಾರದ ಕಾರಣ ಹತ್ತಿ ಬಾಡಿ ರೈತರಲ್ಲಿ ನಿರಾಸೆ ಮೂಡಿಸಿದ್ದು, ಬಹುತೇಕ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಇದರ ಜತೆಗೆ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಾಟಾಚಾರಕ್ಕೆ ಎಂಬಂತೆ ಆತುರಾತುರವಾಗಿ ಸಭೆ ಮಾಡಿದರು. ಆದರೆ ಈ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಎರಡು ಬಾರಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡ ರೈತರಿಗೆ ಪರಿಹಾರ ನೀಡಲು ಸಮೀಕ್ಷೆ ನಡೆಸಲು ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದ್ದರೂ, ಈವರೆಗೆ ಯಾವುದೇ ಸಮೀಕ್ಷೆಯಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಗ್ರಾಮ ಪಂಚಾಯತಿಗಳಿಗೆ ಬಿಡಿಗಾಸು ನೀಡದೆ ಇರುವುದರಿಂದ ಹನಿ ನೀರಿಗೂ ಅಲೆದಾಡುವಂತಾಗಿದೆ.



72 ಗ್ರಾಮಗಳಿಗೆ ಹನಿ ನೀರಿಗೆ ಸಮಸ್ಯೆ
ಕಳೆದ ಮಳೆಗಾಲದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಪರಿಣಾಮ, ನದಿಗಳಿಗೆ ಒಳಹರಿವು ಕಡಿಮೆಯಾಗಿ ನದಿ ಪಾತ್ರಗಳು ಸಂಪೂರ್ಣ ಬತ್ತಿಹೋಗಿವೆ. ನದಿಗಳಲ್ಲಿದ್ದ ಸಣ್ಣಪುಟ್ಟ ಗುಂಡಿಗಳೂ ಸಹ ಈಗ ಒಣಗಿದ್ದು, ನೀರಿನ ಮೂಲಗಳೇ ಇಲ್ಲದಂತಾಗಿದೆ. ರೈತರ ಪೈರುಗಳು ಒಣಗಿ ಹೋಗುತ್ತಿರುವುದು ಒಂದು ಕಡೆಯಾದರೆ, ಕುಡಿಯುವ ನೀರಿಗೂ ದಾರಿ ಇಲ್ಲದಾಗಿದೆ. ಜಿಲ್ಲೆಯ ಕೃಷ್ಣಾ ನದಿಯು ಪಾತ್ರದ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು, ಸಿಂಧನೂರು, ಮಾನ್ವಿ ಸೇರಿ ಒಟ್ಟು 105 ನದಿ ಪಾತ್ರದಲ್ಲಿ ಬರುತ್ತಿದ್ದು, ನದಿ ಪಾತ್ರದ ಚಿಂಚೋಡಿ, ಜಾಲಹಳ್ಳಿ, ಕರಡಿಗುಡ್ಡ, ಅಮರಾಪುರ, ಕರಿಗುಡ್ಡ, ದೊಂಡಂಬಳಿ, ಕೊಪ್ಪರ, ಯಮನಾಳ ಮತ್ತು ಶಾವಂತಗೇರಾ ಗ್ರಾಮ ಪಂಚಾಯಿತಿ ಮೂಲಕ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ನದಿಯ ನಡುವೆ ಅಲ್ಲಲ್ಲಿ ನಿಂತಿರುವ ಕಲುಷಿತ ನೀರನ್ನು ಜೆಸಿಬಿ ಬಳಸಿ ಕಾಲುವೆ ಮಾಡಿ ದಡಕ್ಕೆ ತಂದು ಹಳ್ಳಿಗಳಿಗೆ ಪೂರೈಸಲಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಬಹುದೆಂದು ಸ್ಥಳೀಯರು ಆತಂಕಪಡುತ್ತಿದ್ದಾರೆ.



ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿಯವ ನೀರಿಗಾಗಿ ಶೀಘ್ರದಲ್ಲಿ ನಾರಾಯಣಪುರ ಹಾಗೂ ತುಂಗಾಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಜತೆಗೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಪೂವಿತಾ ಎಸ್. ಡಿಸಿ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net