ಕವಿತಾಳ:ಭಕ್ತರ ಸಹಕಾರದಿಂದ ಶ್ರೀ ಬಸವೇಶ್ವರ ನೂತನ ಶಿಲಾ ದೇವಸ್ಥಾನವನ್ನು ನಿರ್ಮಿಸುತ್ತಿರುವುದು ಮಾದರಿ ಕಾರ್ಯ ಎಂದು ಯದ್ದಲದೊಡ್ಡಿಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ವಟಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಬಸವೇಶ್ವರ ಶಿಲಾ ದೇವಸ್ಥಾನದ ಹೊಸ್ತಿಲು ಪೂಜೆ ನೆರವೇರಿಸಿ ಗುರುವಾರ ಆಶೀರ್ವಚನ ನೀಡಿದರು.
ನಮ್ಮ ಭಾಗದಲ್ಲಿ ವಟಗಲ್ ಬಸವೇಶ್ವರ ದೇವರು ಅಪಾರ ಭಕ್ತರನ್ನು ಹೊಂದಿದ್ದಾರೆ. ಒಳಬಳ್ಳಾರಿ ಚನ್ನಬಸವೇಶ್ವರ ಶರಣರು ಬಸವೇಶ್ವರ ದೇವರ ವರಪುತ್ರರಾಗಿದ್ದರು. ಗ್ರಾಮಸ್ಥರು, ದೇವಸ್ಥಾನ ಸಮಿತಿ ಸದಸ್ಯರು ಸೇರಿ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲು ಮುಂದಾಗಿದ್ದು, ಬಸವೇಶ್ವರರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಕಡಬೂರ ಮಾತನಾಡಿ, ಬಸವೇಶ್ವರ ದೇವಸ್ಥಾನವನ್ನು ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಗ್ರಾಮಸ್ಥರು ಮತ್ತು ಭಕ್ತರ ಸಹಕಾರ ಮುಖ್ಯವಾಗಿದೆ ಎಂದರು.