ದೇವದುರ್ಗ: ಪಟ್ಟಣದ ಬಹುತೇಕ ಬಡವಾಣೆಗಳಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಪುರಸಭೆಯು ತ್ವರಿತವಾಗಿ ಧೂಳು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್ಡಿಪಿಐ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯಗೆ ಗುರುವಾರ ಮನವಿ ಸಲ್ಲಿಸಿದರು.
ಎಲ್ಲ ಬಡಾವಣೆಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಮುಖ್ಯರಸ್ತೆಗಳು ಧೂಳಿನಿಂದ ಆವರಿಸಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಮರಳು, ಧೂಳಿನಿಂದ ಜನರಿಗೆ ಅಸ್ತಮಾ, ಕೆಮ್ಮು, ನೆಗಡಿ ರೋಗ ಆವರಿಸುವ ಆತಂಕವಿದೆ.
ಅಲ್ಲದೆ ಸೊಳ್ಳೆಗಳ ಹಾವಳಿ ಮಿತಿಮೀರಿದ್ದು, ಬಹುತೇಕ ಕಡೆ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಕೂಡಲೇ ಮುಖ್ಯರಸ್ತೆಗಳಲ್ಲಿ ಧೂಳು ನಿವಾರಣೆಗೆ ಮರಳು, ಮಣ್ಣು ತೆರವು ಮಾಡಬೇಕು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನೀರು ಸಿಂಪಡಿಸಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಚರಂಡಿ ಹೂಳು ತೆರವು ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.