ದೇವದುರ್ಗ: ಜಾಲಹಳ್ಳಿ ಪಿಡಿಒ ವಿರುದ್ಧ ಕರ್ತವ್ಯಲೋಪ ಎಸಗಿರುವ ದೂರು ಕೇಳಿಬಂದಿದ್ದು, ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಜೈಭೀಮ್ ಸಂಘರ್ಷ ಸಮಿತಿಯಿಂದ ಗುರುವಾರ ತಾಪಂ ಕಚೇರಿಯಲ್ಲಿ ಇಒ ಕೆ.ರಾಜೇಂದ್ರ ಕುಮಾರಗೆ ಮನವಿ ಸಲ್ಲಿಸಲಾಯಿತು.
ಪಿಡಿಒ ಲಕ್ಷ್ಮೀ ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಜನರು ಸಮಸ್ಯೆ ಬಗ್ಗೆ ಕರೆ ಮಾಡಿದರೆ ಸ್ವೀಕರಿಸದೆ ನಿರ್ಲಕ್ಷೃ ವಹಿಸುತ್ತಿದ್ದಾರೆ. ಜಾಲಹಳ್ಳಿ ವಿವಿಧ ವಾರ್ಡ್‌ಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರು ಸಮಸ್ಯೆಗಳ ಮಧ್ಯೆ ಜೀವನ ನಡೆಸುವಂತಾಗಿದೆ.
ಇತ್ತೀಚೆಗೆ ಜಿಪಂ ಸಿಇಒ ಈಶ್ವರಕುಮಾರ್ ಕಾಂದೂ ಗ್ರಾಪಂಗೆ ಭೇಟಿ ನೀಡಿದಾಗ ಕಚೇರಿಗೆ ಗೈರಾಗಿ ಕರ್ತವ್ಯಲೋಪ ಎಸಗಿದ್ದಾರೆ. ಸಿಬ್ಬಂದಿ ಮೇಲೆ ಹಿಡಿತವಿಲ್ಲದಾಗಿದ್ದು, ಅವರ ವಿರುದ್ಧ ಕರ್ತವ್ಯಲೋಪ ಆರೋಪದಡಿ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷೃ ವಹಿಸಿದರೆ ತಾಪಂ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.