ಚನ್ನಳ್ಳಿ ಗ್ರಾಪಂ ವಿರುದ್ಧ ಕ್ರಮಕೈಗೊಳ್ಳಿ Take action against Channalli Grama Panchayat
* ಸಿಂಧನೂರಿನಲ್ಲಿ ತಾಪಂ ಇಒಗೆ ಕರವೇ ಮನವಿ
ಸಿಂಧನೂರು: ತಾಲೂಕಿನ ಚನ್ನಳ್ಳಿ ಗ್ರಾಪಂನಲ್ಲಿ ಖಾತ್ರಿ ಯೋಜನೆ ಅನುದಾನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ತಾಲೂಕು ಘಟಕ ಗುರುವಾರ ತಾಪಂ ಇಒ ಚಂದ್ರಶೇಖರಗೆ ಮನವಿ ಸಲ್ಲಿಸಿತು.
ಗ್ರಾಮ ಪಂಚಾಯಿತಿಯಲ್ಲಿ ಮೇ 1ರಿಂದ 20 ರವರೆಗೆ ವಿವಿಧೆಡೆ ಕಾಮಗಾರಿಗಳ ನಕಲಿ ದಾಖಲೆ ಸೃಷ್ಟಿಸಿ ಕೂಲಿಕಾರರ ಹೆಸರಿನಲ್ಲಿ ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ.
ನಿಯಮದಂತೆ ಕೆಲಸ ಮಾಡುವ ಪ್ರದೇಶದಲ್ಲಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಕೂಲಿಕಾರರ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು. ಆದರೆ, ಮೇಟಿಗಳು ಕೂಲಿಕಾರರ ಮನೆ ಮನೆಗೆ ಭೇಟಿ ನೀಡಿ ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಸೆಕೆಂಡ್ ವಿಡಿಯೋ ಮಾಡಿಕೊಂಡು ಕಾಮಗಾರಿ ಪ್ರದೇಶಕ್ಕೆ ತೆರಳಿ ಲೊಕೇಶನ್‌ನಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ ಫೋಟೋಗಳನ್ನು ಇನ್ನೊಂದು ಮೊಬೈಲ್ ಸಹಾಯದಿಂದ ಅಪ್‌ಲೋಡ್ ಮಾತ್ತಾರೆ.
ಎರಡನೇ ಫೋಟೊ ಅಪ್‌ಲೋಡ್ ಮಾಡುವಾಗ ಮೊದಲ ಕೂಲಿಕಾರರಿಗೂ, ಎರಡನೇ ಕೂಲಿಕಾರರಿಗೂ ಸಂಬಂಧವಿಲ್ಲದಂತೆ ಅದಲಿ-ಬದಲಿ ಫೋಟೊ ಅಪ್‌ಲೋಡ್ ಮಾಡಲಾಗಿದೆ. ಹೀಗೆ ಮನರೇಗಾ ನಿಯಮಾವಳಿಗಳನ್ನು ಉಲ್ಲಂಘಿಸಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗಿದೆ. ಕೂಡಲೇ ಕ್ರಮಕೈಗೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ದುರ್ಬಳಕೆಯಾದ ಹಣ ವಸೂಲಿ ಮಾಡಬೇಕು. ಕೆಲಸ ಮಾಡಿದವರಿಗೆ ಕೂಲಿ ಪಾವತಿಸಬೇಕು ಎಂದು ಆಗ್ರಹಿಸಿದರು.
ಹತ್ತು ದಿನದೊಳಗೆ ಎಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಗ್ರಾಪಂ ಮುಂದೆ ಪ್ರತಿಭಟನೆ ನೆಡಸಲಾಗುವುದು ಎಂದು ಎಚ್ಚರಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ಸುರೇಶ ಗೊಬ್ಬರಕಲ್, ಉಪಾಧ್ಯಕ್ಷ ಹನುಮೇಶ ತಿಪ್ಪನಹಟ್ಟಿ, ಸಂಚಾಲಕ ಮೆಹಬೂಬಸಾಬ್ ಕೆಂಗಲ್, ವೀರೇಶ ಚನ್ನಳ್ಳಿ ಇದ್ದರು.