ಬೇಸಿಗೆ ತಂದ ಭರ್ಜರಿ ಆದಾಯ

ರಾಯಚೂರು ರೈಲ್ವೆ ನಿಲ್ದಾಣ
ರಾಯಚೂರು ರೈಲ್ವೆ ನಿಲ್ದಾಣ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಮಧ್ಯ ರೈಲ್ವೆಗೆ ಬಂಪರ್ ಹಣದ ಹರಿವು,
  • ಪ್ರಯಾಣಿಕರು ಹಾಗೂ ಸರಕು ಸಾಗಣೆಯಲ್ಲಿ ಸಾಧನೆ
ರಾಯಚೂರು

ದಕ್ಷಿಣ ಮಧ್ಯ ರೈಲ್ವೆಗೆ ಮೊದಲ ಬಾರಿಗೆ ಕಳೆದ ಬೇಸಿಗೆಯಲ್ಲಿ ಭರ್ಜರಿ ಆದಾಯ ತಂದಿದ್ದು, ಶಾಲಾ- ಕಾಲೇಜುಗಳ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆಯಲ್ಲಿನ ಹೆಚ್ಚಳ ರೈಲ್ವೆ ವಲಯಕ್ಕೆ ಉತ್ತಮ ಹಣಗಳಿಕೆಗೆ ದಾರಿ ಮಾಡಿದೆ.

ರಾಯಚೂರು ಹಾಗೂ ಯಾದಗಿರಿ ಸೇರಿದಂತಿರುವ ದಕ್ಷಿಣ ಮಧ್ಯ ರೈಲ್ವೆ ವಲಯವು ಬೇಸಿಗೆ ರಜೆಯಲ್ಲಿ ಕುಟುಂಬ ಸಮೇತರಾಗಿ ವಿವಿಧ ಪ್ರದೇಶಗಳಿಗೆ ಪ್ರವಾಸ ಮಾಡಿದ ಹಿನ್ನಲೆಯಲ್ಲಿ ಹೆಚ್ಚುವರಿ ರೈಲುಗಳ ಸಂಚಾರ, ಸರಕು ಸಾಗಣೆಯ ವೇಗ ಹೆಚ್ಚಳದ ಮೂಲಕ ಇಂಥದ್ದೊಂದು ಸಾಧನೆಗೆ ಸಾಕ್ಷಿಯಾಗಿದೆ.
4 ತಿಂಗಳಲ್ಲಿ ಹೆಚ್ಚಿದ ಆದಾಯ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ಎಪ್ರಿಲ್ ತಿಂಗಳಿಂದ ಜುಲೈವರೆಗೆ ಕಳೆದ ವರ್ಷಕ್ಕಿಂತ ಶೇ.06 ರಷ್ಟು ಆದಾಯ ಹೆಚ್ಚಿಸಿಕೊಂಡಿದೆ. ಅದೇ ರೀತಿ ಮಕ್ಕಳ ಶಾಲಾ ಕಾಲೇಜುಗಳು ರಜೆ ಹಿನ್ನಲೆಯಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕಡೆಗೆ ಹೆಚ್ಚಿನ ಜನರು ರೈಲು ಸಂಚಾರದಿಂದಲೂ ಹೆಚ್ಚಿನ ಆದಾಯ ಗಳಿಸುವ ಮೂಲಕ ಸಾಧನೆ ಮಾಡಿದೆ. 2025 ರಲ್ಲಿ ಎಪ್ರಿಲ್‌ನಿಂದ ಜುಲೈವರೆಗೆ ಒಟ್ಟು 50.17 ಮಿಲಿಯನ್ ಜನರು ಪ್ರಯಾಣ ಮಾಡಿ 1066.47 ಕೋಟಿ ರೂ.ಪ್ರಯಾಣಿಕರಿಂದಗಳಿಸಿತ್ತು. ಈ ಬಾರಿ ಇಲಾಖೆಯಿಂದ 50.86 ಮಿಲಿಯನ್ ಜನ ಸಂಚಾರ ಮಾಡಿ 1148.84 ಕೋಟಿ ರೂ. ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ 53.83 ಮಿಲಿಯನ್ ಜನ ಪ್ರಯಾಣಿಕರು ಸಂಚರಿಸುವ ಮೂಲಕ 1236.13 ಕೋಟಿ ರೂ. ಗಳಿಸುವ ಮೂಲಕ ಭಾರೀ ಆದಾಯ ದಕ್ಷಿಣ ಮಧ್ಯ ರೈಲ್ವೆಗೆ ತಂದುಕೊಟ್ಟಿದ್ದಾರೆ. ಇದುವರೆಗಿನ ಆದಾಯಕ್ಕಿಂತ ಶೇ.06 ರಷ್ಟು ಹೆಚ್ಚಳ ಬೇಸಿಗೆಯಲ್ಲಿ ಗಳಿಸಿದೆಂದು ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಆರು ಆಡಳಿತಾತ್ಮಕ ವಿಭಾಗಗಳು
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಆರು ಆಡಳಿತಾತ್ಮಕ ವಿಭಾಗಗಳಿದ್ದು, ಇದರಲ್ಲಿ ವಿಜಯವಾಡ, ಗುಂತಕಲ್, ಗುಂಟೂರು, ನಾಂದೇಡ್, ಸಿಕಿಂದ್ರಾಬಾದ್, ಹೈದರಾಬಾದ್ ಸೇರಿವೆ. ರಾಯಚೂರು ಹಾಗೂ ಯಾದಗಿರಿ ಇದೇ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿವೆ.ಅದರಲ್ಲೂ ರಾಯಚೂರು ರೈಲು ನಿಲ್ದಾಣವು ಅತೀ ಹೆಚ್ಚು ಆದಾಯ ತರುತ್ತಿರುವ ನಿಲ್ದಾಣಗಳಲ್ಲೊಂದಾಗಿದೆ.
ರಾಯಚೂರು ನಿಲ್ದಾಣ-
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮುಂಬೈನಿಂದ ಚೆನೈ ಮಾರ್ಗವಾಗಿ ಸಂಚಾರಿಸುವ ರೈಲ್ವೆ ಹಳಿ ಹಾಕುವಾಗ ನಿರ್ಮಾಣಗೊಂಡ ರಾಯಚೂರು ರೈಲು ನಿಲ್ದಾಣ ದೇಶದ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದಾಗಿದ್ದು,
ದೇಶದ ಸ್ವಾತಂತ್ರೃ ಇತಿಹಾಸವನ್ನು ತನ್ನ ಒಡಲಿನಲ್ಲಿ ಹೊತ್ತುಕೊಂಡಿದೆ. ಪ್ರತಿದಿನ ದೇಶದ ವಿವಿಧ ಪ್ರದೇಶಗಳಿಗೆ ರಾಯಚೂರಿನ ಮಾರ್ಗವಾಗಿ ರೈಲು ಸಂಚಾರಿಸುತ್ತವೆ. ಸಾವಿರಾರು ಪ್ರಯಾಣಿಕರನ್ನು ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಮುಂಬೈ ,ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜಿಲ್ಲೆಯ ಮಾರ್ಗವಾಗಿ ರೈಲುಗಳು ಸಂಚರಿಸುತ್ತಿದ್ದು,ಇದಲ್ಲದೇ ಗೂಡ್ಸ್ ರೈಲು ಸೇರಿದಂತೆ ನೂರಾರು ರೈಲುಗಳು ಸಂಚರಿಸುತ್ತವೆ. ಜತೆಗೆ ದಕ್ಷಿಣ ಮದ್ಯ ರೈಲ್ವೆಯಲ್ಲಿ ಹೆಚ್ಚಿನ ಆದಾಯ ತರುವ ನಿಲ್ದಾಣವೆಂದರೆ ರಾಯಚೂರು ರೈಲ್ವೆ ನಿಲ್ದಾಣವಾಗಿದೆ. ಪ್ರತಿನಿತ್ಯ ಸುಮಾರು 14.50 ಕ್ಕೂ ಅಧಿಕ ಜನ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ದಿನಕ್ಕೆ ಸುಮಾರು 7 ರಿಂದ 8 ಲಕ್ಷ ಆದಾಯವನ್ನು ನೀಡಲಾಗುತ್ತದೆಂದು ಮಾಹಿತಿ ತಿಳಿದು ಬಂದಿದೆ.
ದಕ್ಷಿಣ ಮಧ್ಯ ರೈಲ್ವೆಯು ಕಳೆದ 4 ತಿಂಗಳಲ್ಲಿ ಸರಕು ಸಾಗಣೆ ಹಾಗೂ ಪ್ರಯಾಣಿಕರು ಹೆಚ್ಚಿನ ಪ್ರಮಾನದಲ್ಲಿ ಸಂಚಾರ ಮಾಡಿ ಶೇ.6 ರಷ್ಟು ಆದಾಯ ಹೆಚ್ಚಿಸಿಕೊಂಡಿದೆ. ಈ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ರೈಲಿನಲ್ಲಿ ಸಂಚಾರ ಮಾಡಿದ್ದರಿಂದ ಆದಾಯ ಹೆಚ್ಚಳವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net