ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಅಧ್ಯಕ್ಷತೆಯಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸುಖದೇವ , ನಿಖಿಲ್ ಮೇಟಿ , ಪ್ರವೀಣ್ , ಮಲ್ಲಿಕಾರ್ಜುನ ಸ್ವಾಮಿ,ಸೌಮ್ಯ ಪ್ಯಾಟಿ ಗೆ ವಿಶೇಷ ಸನ್ಮಾನ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ್, ತಹಶೀಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಡಾ.ಕೆ.ಡಿ.ಬಡಿಗೇರ, ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ ಇದ್ದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಲಿ ಡಿಸಿ ನಿತೀಶ್ ಕೆ. ಸಲಹೆ
ವಿದ್ಯಾರ್ಥಿಗಳಿಗೆ ಸನ್ಮಾನ
ರಾಯಚೂರು ಜಿಲ್ಲಾಡಳಿತ
ರಾಯಚೂರು
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಜೀವನ ನಡೆಸಲು ಸಹಕಾರಿಯಾಗುತ್ತದೆಂದು ಜಿಲ್ಲಾಧಿಕಾರಿ ನಿತೀಶ್ ಕೆ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೆಚ್ಚಿಸಲು ಜಿಲ್ಲೆಯ ಜಿಲ್ಲಾ ಮಟ್ಟದಿಂದ ಗ್ರಾಮೀಣ ಮಟ್ಟದವರೆಗೂ ವಿಶೇಷವಾದ ತಂಡಗಳನ್ನು ರಚಿಸಲಾಗಿತ್ತು. ಜತೆಗೆ ಪ್ರತಿ ತಾಲೂಕಿಗೆ ನೋಡೆಲ್ಅಧಿಕಾರಿಗಳನ್ನು ನೇಮಕ ಮಾಡಿ, ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ವಿಶೇಷವಾದ ಕಲಿಕಾ ಚಟುವಟಿಕೆಗಳನ್ನು ನಡೆಸಿ, ಜಿಲ್ಲೆಯ ಫಲಿತಾಂಶವನ್ನು ಸುಧಾರಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಉತ್ತೀಣಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತ್ಯಂತ ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ರಾಜ್ಯಕ್ಕೆ 21ನೇ ಸ್ಥಾನದಲ್ಲಿದ್ದೇವೆ ಎಂದು ನಮ್ಮನ್ನು ನಾವು ಬೆನ್ನು ತಟ್ಟಿಕೊಳ್ಳದೇ, ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿಯನ್ನು ಸುಧಾರಿಸಲು ಇಂದಿನಿಅದಲೇ ರೂಪು ರೇಷೆಗಳನ್ನು ಹಾಕಿಕೊಳ್ಳಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು ಅತ್ಯಗತ್ಯವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೇ ನಮ್ಮಲ್ಲಿ ಶಿಕ್ಷಕರ ಕೊರತೆ ಇದ್ದು, ಈ ಸವಾಲಿನ ಮಧ್ಯೆಯೂ ಈ ಬಾರಿ ಶೈಕ್ಷಣಿಕ ಪ್ರಗತಿಯನ್ನು ಉತ್ತಮವಾಗಿ ಸಾಧಿಸಿದ್ದೇವೆ. ಇದೇ ರೀತಿ ನಿರಂತರವಾಗಿ ಶೈಕ್ಷಣಿಕ ಪ್ರಗತಿ ಹೆಚ್ಚಳಕ್ಕೆ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಎಂದರೇ ಕೇವಲ ಪ್ರೌಢ ಶಿಕ್ಷಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿಯಾಗುತ್ತದೆ. ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಪಾಲಕರ ಪರಿಶ್ರಮಕ್ಕೆ ಪ್ರತಿಫಲವೆಂದರೇ ಅದು ವಿದ್ಯಾರ್ಥಿ ಉತ್ತಮ ಫಲಿತಾಂಶವನ್ನು ತೆಗೆವುದು ಮಾತ್ರ ಆಗಿರುತ್ತದೆ. ಶಿಕ್ಷಣ ಇಲಾಖೆ ಈ ಬಾರಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಶಿಕ್ಷಣ ಇಲಾಖೆಯ ಜವಾಬ್ದಾರಿ ಇನ್ನೂ ಹೆಚ್ಚಾಗಿದ್ದು, ನಿರಂತರ ಶ್ರಮದಿಂದ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ತಲುಪಬಹುದು, ಮುಂದಿನ ದಿನಗಳಲ್ಲಿ ಇದೇ ರೀತಿ ಶ್ರಮವಹಿಸಿ ಕೆಲಸ ಮಾಡಿದರೇ ಮೊದಲನೇ ಸ್ಥಾನಕ್ಕೆ ಬರುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು. ನಂತರ ಎಸ್‌ಎಸ್‌ಎಲ್‌ಸಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಮಾನ್ವಿ ತಾಲೂಕಿನ ಸುಖದೇವ (625), ಸಿಂಧನೂರಿನ ನಿಖಿಲ್ ಮೇಟಿ (622), ಲಿಂಗಸುಗೂರಿನ ಪ್ರವೀಣ್ (622), ದೇವದುರ್ಗದ ಮಲ್ಲಿಕಾರ್ಜುನ ಸ್ವಾಮಿ (622) ಹಾಗೂ ರಾಯಚೂರಿನ ಸೌಮ್ಯ ಪ್ಯಾಟಿ (619) ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ್, ತಹಶೀಲ್ದಾರ್ ಸುರೇಶ ವರ್ಮಾ, ಡಿಡಿಪಿಐ ಡಾ.ಕೆ.ಡಿ.ಬಡಿಗೇರ, ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ ಭಂಡಾರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನೇಕರು ಇದ್ದರು.