ಕ್ರೀಡಾ ಆಸಕ್ತಿಯತ್ತ ವಿದ್ಯಾರ್ಥಿಗಳ ಚಿತ್ತ 226 ವಿದ್ಯಾರ್ಥಿಗಳಿಂದ ನೋಂದಣಿ

ರಾಯಚೂರಿನ ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ಆಟವಾಡುತ್ತಿರುವುದು.
ರಾಯಚೂರಿನ ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ಆಟವಾಡುತ್ತಿರುವುದು.
Published on
ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಆದರೆ ಶಾಲಾ ಮಕ್ಕಳು ಮಾತ್ರ ಯಾವುದೇ ಬಿಸಿಲಿಗೆ ಎದೆಗುಂದದೆ ಬೇಸಿಗೆ ರಜೆಯನ್ನು ಕ್ರೀಡಾ ಆಸಕ್ತಿಯತ್ತ ಪರಿವರ್ತಿಸಿದ್ದಾರೆ.
ಜಿಲ್ಲಾ ಕ್ರೀಡಾ ಇಲಾಖೆಯು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಿ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲೂ ಕ್ರೀಡೆಯಲ್ಲಿ ಗುರುತಿಸಿ ಕೊಳ್ಳಲು ಅವಶ್ಯವಿರುವ ತರಬೇತಿಯನ್ನು ನೀಡುವ ಮೂಲಕ ಕ್ರೀಡಾಪಟುಗಳ ತಯಾರಿಯಲ್ಲಿ ನಿರತವಾಗಿದೆ.


ಮಕ್ಕಳಿಗೆ ಶಿಬಿರ
ಪ್ರಸಕ್ತ ಸಾಲಿನ ಶೈಕ್ಷಣಿಕ ಪೂರ್ಣಗೊಳ್ಳುತ್ತಿದ್ದಂತೆ ಮಕ್ಕಳಿಗೆ ಎರಡು ಕಾಲ ಬೇಸಿಗೆ ರಜೆಯನ್ನು ನೀಡಲಾಗುತ್ತಿದೆ. ಈ ಅವಧಿಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಪಾಲಕರು, ಪೋಷಕರು ನಿತ್ಯವೂ ಇನ್ನಿಲ್ಲದ ಹರಸಾಹಸ ಪಡುವುದು ಸಾಮಾನ್ಯವಾಗಿದೆ. ಈ ಪೈಕಿ ಹಲವು ಮತ್ತು ತಮ್ಮ ನೆಚ್ಚಿನ ಊರುಗಳಿಗೆ, ಪ್ರವಾಸಕ್ಕೆ ತೆರಳಿದರೆ, ಇನ್ನೂ ಕೆಲವು ಮಕ್ಕಳು ಬೇಸಿಗೆ ಶಿಬಿರದಂತಹ ತರಬೇತಿಯಲ್ಲಿ ತೊಡಗಿಸಿ ಕೊಳ್ಳಲಿವೆ. ಆದರೆ, ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಿಯಾಯಿತಿ ದರದಲ್ಲಿ 8-18ವರ್ಷದೊಳಗಿನ ಮಕ್ಕಳಿಗೆ ಮಕ್ಕಳಿಗೆ ಬ್ಯಾಡ್ಮಿಂಟನ್,ಬಾಸ್ಕೇಟ್ ಬಾಲ್ ಹಾಗೂ ಸ್ವಿಮ್ಮಿಂಗ್ ಅಭ್ಯಾಸಕ್ಕೆ ಮುಂದಾಗಿದೆ. ಆನ್‌ಲೈಲ್ ಬದಲಾಗಿ ನೇರವಾಗಿ ಅರ್ಜಿ ಮೂಲಕ ಮಕ್ಕಳನ್ನು ಪ್ರವೇಶಾತಿ ಪಡೆದು, ಯಾವುದೇ ಕೇವಲ ಬ್ಯಾಡ್ಮಿಂಟನ್,ಸ್ವಿಮ್ಮಿಂಗ್‌ಗೆ ಮಾತ್ರ ಶುಲ್ಕ ವಿಧಿಸಿ ಬಾಕಿ ಉಳಿದ ಬಾಸ್ಕೆಟ್ ಬಾಲ್‌ಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ನಿರಂತರವಾಗಿ ಎರಡು ತಿಂಗಳ ಕಾಲ ತರಬೇತಿ ನೀಡುತ್ತಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಈಗಾಗಲೇ ನೂರಾರು ಮಕ್ಕಳು ಪ್ರವೇಶ ಪಡೆಯುವ ಮೂಲಕ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಕ್ರೀಡಾ ಮನೋಭಾವನೆ ಇಲಾಖೆ ಮುಂದು
ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಂಕಗಳನ್ನು ಗಳಿಸುವ ಭರದಲ್ಲಿ ಪತ್ಯೇತರ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ. ಅದರಲ್ಲೂ, ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಅಭ್ಯಾಸ ಕನಸಾಗುವಂತಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯಿಂದ ಉಚಿತವಾಗಿ ಆರಂಭಿಸಿದ ಶಿಬಿರ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದರೊಂದಿಗೆ, ಯುವ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ ಸಹಕಾರಿಯಾದಂತಾಗಿದೆ. ಶಿಬಿರದ ಅವಧಿಯಲ್ಲಿ ವಿವಿಧ ಕ್ರೀಡೆ ಪಾಲ್ಗೊಂಡಿರುವ ಮಕ್ಕಳಿಗೆ ನಿತ್ಯ ಕ್ರೀಡೆಗಳ ಅಭ್ಯಾಸ ಮಾಡಿಸಲಾಗುತ್ತಿದ್ದು, ಅದರಲ್ಲಿ ಬ್ಯಾಡ್ಮಿಂಟನ್,ಸ್ವಿಮ್ಮಿಂಗ್‌ಗಳಲ್ಲಿ ಹೆಚ್ಚಿನ ಆಸಕ್ತಿ ತೋರುವ, ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸುವ ಆಯ್ದ ಕ್ರೀಡಾಪಟುಗಳನ್ನು ಗುರುತಿಸಿ ಸುಧಾರಿತ ತರಬೇತಿ ನೀಡಲಾಗುತ್ತದೆ. ಈ ಮೂಲಕ ಆಯ್ಕೆ ಗೊಂಡ ಮಕ್ಕಳು ಜಿಲ್ಲಾ, ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಸ್ಪರ್ಧಿಸಲು ಅವಶ್ಯವಿರುವ ತರಬೇತಿಯನ್ನು ಇಲಾಖೆಯಿಂದ ನೀಡಲಾಗುತ್ತಿದೆ.

ಎಷ್ಟು ವಿದ್ಯಾರ್ಥಿಗಳು ನೋಂದಣಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಅಸಕ್ತಿ ಬೆಳಸಿಕೊಳ್ಳಲು ಕರೆ ನೀಡಿದ್ದರಿಂದ ಬ್ಯಾಡ್ಮಿಂಟನ್ ಕ್ರೀಡೆಗೆ 76 ಜನ, ಸ್ವಿಮ್ಮಿಂಗ್‌ಗೆ 105 ಹಾಗೂ ಬಾಸ್ಕೇಟ್ ಬಾಲ್‌ಗೆ 45 ಜನರು ನೋಂದಣಿ ಮಾಡಿಕೊಂಡಿದ್ದು, ಒಟ್ಟು ಮೂರು ತಂಡಗಳಾಗಿ ವಿದ್ಯಾರ್ಥಿ ನೂರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ.

ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ನಮ್ಮ ಇಲಾಖೆಯಿಂದ ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ತರಬೇತಿಗೆ ಅತಿ ಕಡಿಮೆ ಸರ್ಕಾರಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಉಳಿದ ಬಾಸ್ಕೇಟ್ ಬಾಲ್‌ಗೆ ಯಾವುದೇ ಶುಲ್ಕ ವಿದಿಸಿಲ್ಲ ಇದುವರೆಗೆ ಒಟ್ಟು 226 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ.

ವೀರೇಶ ನಾಯಕ ಉಪ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net