ಎನ್-ಜೆನ್ ಅಂಚೆ ಕಚೇರಿ ಉದ್ಘಾಟನೆ ವಿದ್ಯಾರ್ಥಿಗಳು ಸೇವೆಗಳನ್ನು ಪಡೆಯಿರಿ- ಕುಲಪತಿ
ರಾಯಚೂರಿನ ಕೃಷಿ ವಿವಿಯ ಆವರಣದಲ್ಲಿ ಬುಧವಾರ ಉತ್ತರ ಕರ್ನಾಟಕದ ಮೊಟ್ಟಮೊದಲ ಎನ್-ಜೆನ್ ಅಂಚೆ ಕಚೇರಿಗೆ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ ಚಾಲನೆ ನೀಡಿದರು. ಧಾರವಾಡದ ಉತ್ತರ ಕರ್ನಾಟಕದ ಅಂಚೆ ಸೇವೆಗಳ ನಿರ್ದೇಶಕ ಶ್ರೀಹರ್ಷ ಎನ್., ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಬಿಡಿ) ಎಚ್.ಎಂ.ಮಂಜೇಶ, ಅಂಚೆ ಅಧೀಕ್ಷಕರಾದ ಶಿವಾನಂದ ಆರ್.ಎಚ್., ಕೃಷಿ ವಿಶ್ವವಿದ್ಯಾಲಯದ ರವಿಶಂಕರ, ಕಿರಣ್ ಕುಮಾರ ಜಿ., ಕಚೇರಿ ಸಹಾಯಕಿ ಹೀರಾಬಾಯಿ, ಸಹಾಯಕ ಅಂಚೆ ಅಧೀಕ್ಷಕರ ಪಿ.ಚಿದಾನಂದ್, ಡಿ.ಎಂ.ಶರಣಪ್ಪ ಇದ್ದರು.
ರಾಯಚೂರು ಇಂದಿನ ಕಾಲದಲ್ಲಿಕಣ್ಮರೆಯಾಗುತ್ತಿರುವ ಅಂಚೆ ಸೇವೆಗಳನ್ನು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕ್ಯಾಂಪಸ್ ಸಮುದಾಯಕ್ಕೆ ಇನ್ನಷ್ಟು ಹತ್ತಿರ ತರಬೇಕಾಗಿದೆಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ನಗರದ ಕೃಷಿ ವಿವಿಯ ಆವರಣದಲ್ಲಿ ಬುಧವಾರ ಉತ್ತರ ಕರ್ನಾಟಕದ ಮೊಟ್ಟಮೊದಲ ಎನ್-ಜೆನ್ ಅಂಚೆ ಕಚೇರಿಗೆ ಚಾಲನೆ ನೀಡಿ ಮಾತನಾಡಿ, ಇ-ಮೇಲ್, ವಾಟ್ಸಾ ಆಪ್ ಹಾಗೂ ಎಸ್‌ಎಂಎಸ್‌ಗಳ ಯುಗದಲ್ಲಿಯುವ ಜನತೆಯನ್ನು ಆಕರ್ಷಿಸುವ ಉದ್ದೇಶದಿಂದಲೇ ಭಾರತೀಯ ಅಂಚೆಯು ವಿನೂತನ ಪ್ರಯೋಗ ಆರಂಭಿಸಿದ್ದು, ಎಲ್ಲ ವಿದ್ಯಾರ್ಥಿಗಳು ಈ ಸೇವೆಗಳನ್ನು ಪಡೆಯಬೇಕು. ಕಚೇರಿಯು ಸ್ವಯಂ ಬುಕಿಂಗ್ ಕಿಯೋಸ್ಕ್ ಮತ್ತು ಕ್ಯೂ ಆರ್.ಕೋಡ್ ಆಧಾರಿತ ತ್ವರಿತ ಪಾವತಿ ಸೇವೆಗಳನ್ನು ಒಳಗೊಂಡಿದೆ. ಉಚಿತ ವೈಫೈ ಸೌಲಭ್ಯ, ಆರಾಮದಾಯಕ ಆಸನ ವ್ಯವಸ್ಥೆ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಹಾಗೂ ಕಾಫಿ ವೆಂಡಿಂಗ್ ಯಂತ್ರ ಅಳವಡಿಸಲಾಗಿದೆ ಎಂದರು.
ಧಾರವಾಡದ ಉತ್ತರ ಕರ್ನಾಟಕದ ಅಂಚೆ ಸೇವೆಗಳ ನಿರ್ದೇಶಕ ಶ್ರೀಹರ್ಷ ಎನ್ ಮಾತನಾಡಿ , 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು ಎನ್-ಜೆನ್ ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು ಎನ್-ಜಿನ್ ಎಂದು ಕರೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೋಸ್ಟ್ ಆಫೀಸ್‌ನಲ್ಲಿ ಇದೆ. ಇದರ ಲಾಭವನ್ನು ಪಡೆಯಬೇಕು ಎಂದರು.
ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಬಿಡಿ) ಎಚ್.ಎಂ.ಮಂಜೇಶ ಮಾತನಾಡಿ, ಕರ್ನಾಟಕದ 3ನೇ ಹಾಗೂ ಉತ್ತರ ಕರ್ನಾಟಕ ಮೊದಲ ಕಚೇರಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿದೆ. ಇಂತಹ ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ನಮ್ಮ ಇಲಾಖೆಯಿಂದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಯುವ ಜನಾಂಗವು ಕಚೇರಿಗೆ ಬರುವಂತೆ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅತಿಕಡಿಮೆ ಖರ್ಚಿನಲ್ಲಿ ಸೇವೆಯನ್ನು ಒದಗಿಸುತ್ತಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಂಚೆ ಅಧೀಕ್ಷಕರಾದ ಶಿವಾನಂದ ಆರ್.ಎಚ್., ಕೃಷಿ ವಿಶ್ವವಿದ್ಯಾಲಯದ ರವಿಶಂಕರ, ಕಿರಣ್ ಕುಮಾರ ಜಿ., ಕಚೇರಿ ಸಹಾಯಕಿ ಹೀರಾಬಾಯಿ, ಸಹಾಯಕ ಅಂಚೆ ಅಧೀಕ್ಷಕರ ಪಿ.ಚಿದಾನಂದ್, ಡಿ.ಎಂ.ಶರಣಪ ಸೇರಿದಂತೆ ಅನೇಕರು ಇದ್ದರು.