ಸಿಂಧನೂರು: ನಗರದ ಎವಿಎಸ್ ಕಾಲೇಜ್ ಬಳಿ ಶುಕ್ರವಾರ ಪಾರ್ಕಿಂಗ್ ಮಾಡಿದ್ದ ಕಾರು ಏಕಾಏಕಿ ಹಿಂದಕ್ಕೆ ತೆಗೆದುಕೊಂಡಿದ್ದರಿಂದ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಬಾಲಕಿಯರು ಗಾಯಗೊಂಡಿದ್ದಾರೆ.
ಎವಿಎಸ್ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಜವಳಗೇರಾ ಗ್ರಾಮದ ಭೂಮಿಕಾ ವೀರರಾಜು(17) ಮೃತೆ. ಸಾಸಲಮರಿಕ್ಯಾಂಪ್ ಮಹೇಶ್ವರಿಯ ಒಂದು ಕಾಲು ಮುರಿದಿದ್ದರೆ, ಮೇಘನಾ ಅಮರಾಪುರ(17), ಜಹಿಬಾ ಸಿಂಧನೂರು(17) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೇತನ ಆಸ್ಪತ್ರೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು ಚಾಲಕ ಹಿಂದಕ್ಕೆ ಅತಿ ವೇಗದಲ್ಲಿ ಚಾಲನೆ ಮಾಡಿದ್ದು, ಅದೇ ಮಾರ್ಗವಾಗಿ ವಿದ್ಯಾರ್ಥಿನಿಯರು ಗಂಗಾವತಿ ಮುಖ್ಯ ರಸ್ತೆ ಸಂಪರ್ಕ ಪಡೆಯುತ್ತಿದ್ದಾಗ ಅಪಘಾತವಾಗಿದೆ. ಚಾಲಕನ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರ ಆಕ್ರಂದನ: ಭೂಮಿಕಾ ವೀರರಾಜು ಎವಿಎಸ್ ಕಾಲೇಜ್‌ನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಎಂದಿನಂತೆ ತರಗತಿ ಮುಗಿಸಿಕೊಂಡು ಊರಿಗೆ ತೆರಳಲು ರಸ್ತೆ ಮಾರ್ಗದಲ್ಲಿ ತೆರಳುವಾಗ ಚೇತನ ಆಸ್ಪತ್ರೆ ಹತ್ತಿರ ಏಕಾಏಕಿ ಕಾರು ಹಿಂದಕ್ಕೆ ತೆಗೆದುಕೊಂಡಿದ್ದರಿಂದ ಡಿಕ್ಕಿಯಾಗಿ ತಲೆ ನಜ್ಜುಗುಜ್ಜಾಗಿದೆ.
ವಿದ್ಯಾರ್ಥಿನಿಯ ಭವಿಷ್ಯ ಅಪಘಾತದಲ್ಲಿಯೇ ಮುಗಿದು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ವೀರರಾಜು ಹಾಗೂ ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಲೇಜು ಅಧ್ಯಕ್ಷರು, ಶಿಕ್ಷಕರು, ವಿದ್ಯಾರ್ಥಿಗಳು ಮಮ್ಮಲ ಮರುಗಿದರು.