ದೇವದುರ್ಗದಲ್ಲಿ ಅಂಗನವಾಡಿ ನೌಕರರ ಸಂಘದಿಂದ ಗುರುವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ
ದೇವದುರ್ಗದಲ್ಲಿ ರ‌್ಯಾಲಿ ನಡೆಸಿ ಆಕ್ರೋಶ
ದೇವದುರ್ಗ:ಎಲ್‌ಕೆಜಿ, ಯುಕೆಜಿ ತರಗತಿ ನೆಪದಲ್ಲಿ ಅಂಗನವಾಡಿಗಳಲ್ಲಿ ದಾಖಲಾದ ಮಕ್ಕಳನ್ನು ಸರ್ಕಾರಿ ಶಾಲೆ ಶಿಕ್ಷಕರು ಕರೆದುಕೊಂಡು ಹೋಗುವ ಶಿಕ್ಷಣ ಇಲಾಖೆ ಆದೇಶ ಖಂಡಿಸಿ ಬಿಇಒ ಕಚೇರಿ ಮುಂದೆ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಗಜೀವನ್ ರಾಮ್ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತೆಯರು ವಿವಿಧ ಬಡಾವಣೆ ಮೂಲಕ ಬಿಇಒ ಕಚೇರಿವರೆಗೆ ರ‌್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದೆ. ಆದರೆ, ಶಾಲೆಗೆ ಮಕ್ಕಳ ಹೊಸ ದಾಖಲಾತಿ ಮಾಡಿಕೊಳ್ಳದೆ ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಅಂಗನವಾಡಿಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಸೂಚನೆ ನೀಡಿ, ಅಂಗನವಾಡಿಗಳ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಆದೇಶ ನೀಡಬೇಕು. ಅಂಗನವಾಡಿ ಕೇಂದ್ರದಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಬಲವರ್ಧನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷೆ ರಂಗಮ್ಮ ಅನ್ವರ್, ಕಾರ್ಯದರ್ಶಿ ರಮಾದೇವಿ, ಖಜಾಂಚಿ ಈಶಮ್ಮ ಊಟಿ, ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ಚಂದ್ರಕಲಾ, ರಂಗಮ್ಮ ಗುಂಟ್ರಾಳ, ಶೇಖಮ್ಮ, ಶಕೀಲಾ, ಲಕ್ಷ್ಮೀ ಗಲಗ, ರುಕ್ಮೀಣಿ, ಯಂಕಮ್ಮ ಇತರರಿದ್ದರು.