8 ಜನರ ಸಾವಿಗೆ ರಾಜ್ಯ ಸರ್ಕಾರದ ಉದಾಸೀನತೆ ಕಾರಣ

N.RAVIKUMARA
N.RAVIKUMARA
Published on
ರಾಯಚೂರು ಬೆಂಗಳೂರಿನಲ್ಲಿ ರಣ ಮಳೆಗೆ ನಾನಾ ಅವಾಂತರ ಹಾಗೂ 8 ಜನರ ಸಾವಿಗೆ ರಾಜ್ಯ ಸರ್ಕಾರದ ಉದಾಸೀನತೆಯೇ ಕಾರಣವಾಗಿದೆಂದು ಎಂಎಲ್ಸಿ ಎನ್.ರವಿ ಕುಮಾರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಸಿಗೆ ಸಮಯದಲ್ಲಿ ಸಹಜವಾಗಿ ಗುಡುಗು ಸಿಡಿಲು ಸಹಿತ ಮಳೆ ಬರುತ್ತದೆ. ಇದರ ಜತೆಗೆ ಹವಮಾನ ಇಲಾಖೆಯಿಂದ ನಾಲ್ಕೈದು ದಿನದಲ್ಲಿ ಮಳೆ ಬರುತ್ತದೆಂದು ಮುನ್ಸೂಚನೆ ಇದ್ದರು, ರಾಜ್ಯದ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಯಾವುದೇ ವಿಚಾರದ ಬಗ್ಗೆ ಒಂದು ಚೂರು ತಯಾರಿ ಮಾಡಿಕೊಂಡಿಲ್ಲ. ಯಥಾ ರಾಜಾ, ತಥಾ ಪ್ರಜಾ ಎನ್ನುವಂತೆಯಾಗಿದೆ. ಬೆಂಗಳೂರಿನಲ್ಲಿ ಕಾಂಪೌಡ್ ಕುಸಿದು 8 ಜನ ಮೃತಪಟ್ಟಿದ್ದಾರೆ. ಕಾಂಪೌಂಡ್ ಬಿದ್ದುಹೋಗುವ ಸ್ಥಿತಿಯಲ್ಲಿ ಎಂದು ಸರ್ಕಾರ ಹಾಗೂ ಇಂಜಿನಿಯರ್ ಹೇಳುತ್ತಾರೆ ಆದರೆ ಯಾಕೆ ಬೀಳಿಸಲಿಲ್ಲ. ಗಿಡ ಮರಗಳು ಬುಡಸಹಿತ ಬೀಳುತ್ತಿವೆ ಅರಣ್ಯ ಇಲಾಖೆ ಏನ್ ಮಾಡುತ್ತಿದೆ. ರಸ್ತೆಗಳು ಇವತ್ತೂ ಕೂಡ ನರಕ ಸದೃಶವಾಗಿವೆ. ಎಲ್ಲೆಡೆ ಗುಂಡಿಗಳಿವೆ. ಒಂದು ರಸ್ತೆ ಗುಂಡಿ ಮುಚ್ಚೋಕೆ ಒಂದು ಲಕ್ಷ ಬೇಕಾ ಎಂದು ಪ್ರಶ್ನೆ ಮಾಡಿದರು. ಇದರ ಜತೆಗೆ ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರ ತಾಂಡವವಾಡುತ್ತಿದೆ. 33 ಕೋಟಿ ಖರ್ಚು ಮಾಡಿದರೂ ರಸ್ತೆ ಸರಿ ಮಾಡಲು ಆಗಿಲ್ಲ, ಗುಂಡಿ ಮುಚ್ಚಲು ಆಗಿಲ್ಲ. ನಮ್ಮ ಬೆಂಗಳೂರು ಸದ್ಯ ರಸ್ತೆ ಗುಂಡಿಗೆ ಪ್ರಖ್ಯಾತಿ ಪಡೆದು ಇಂಟರ್‌ನ್ಯಾಷನಲ್ ಪಾಟ್ ಹೋಲ್ ಸಿಟಿ ಆಗಿದೆ.
ಇದಕ್ಕೆ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಬೇಕೇಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದು ಅವರ ಪಕ್ಷದ ಆಂತರಿಕ ವಿಚಾರ, ಬದಲಾವಣೆ ಮಾಡೋದಾದರೆ ಬೇಗ ಮಾಡಲಿ ಜನರಿಗೆ ತೊಂದರೆ ಕೊಡುವುದು ಬೇಡ. ಖುರ್ಚಿ ಫೈಟ್ ನಿಂದ ಜನರಿಗೆ ತೊಂದರೆ ಆಗುತ್ತಿದೆ. ಬೇಗ ಅದನ್ನು ಬಗೆಹರಿಸಿಕೊಂಡು ಆಡಳಿತ ಕಡೆ ಗಮನ ಕೊಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೇಳುವೆ ಎಂದರು.
ಇದರ ಜತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಬಿಎಸ್‌ವೈ ಅಭಿಮಾನ ಬಳಗದಿಂದ ಮೇ.9 ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮೀತ್ ಷಾ ಸೇರಿದಂತೆ ವಿವಿಧ ಸಚಿವ, ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಶಶೀಲ್ ನಮೋಶಿ, ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಂಸದ ಬಿ.ವಿ.ನಾಯಕ, ಪ್ರಮುಖರಾದ ಸಂತೋಷ ರಾಜಗುರು,ಸಿದ್ದನಗೌಡ, ಜಂಬಣ್ಣ, ಬಸನಗೌಡ ಬ್ಯಾಗವಾಟ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net