ಲಿಂಗಸುಗೂರು ಕೃಷಿ ವಿಸ್ತರಣಾ ಕೇಂದ್ರದಲ್ಲಿ ರೈತರು, ರೈತ ಮಹಿಳೆಯರಿಗೆ ಏರ್ಪಡಿಸಿದ್ದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಕೃಷಿ ಇಲಾಖೆ ಉಪನಿರ್ದೇಶಕ ಡಾ.ಮುತ್ತುರಾಜ ಉದ್ಘಾಟಿಸಿದರು. ಕೇಂದ್ರದ ಮುಖ್ಯಸ್ಥೆ ಡಾ. ವಾಣಿಶ್ರೀ, ಕೃಷಿ ವಿಜ್ಞಾನಿ ರೇಣುಕಾ ಬಿರಾದಾರ, ಇತರರಿದ್ದರು.
ಲಿಂಗಸುಗೂರು: ಬದಲಾದ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಡಾ. ವಾಣಿಶ್ರೀ ಹೇಳಿದರು.
ಕೃಷಿ ವಿಸ್ತರಣಾ ಕೇಂದ್ರದಲ್ಲಿ ರೈತರು, ರೈತ ಮಹಿಳೆಯರಿಗೆ ಏರ್ಪಡಿಸಿದ್ದ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿತ್ಯ ಉತ್ಕೃಷ್ಟ ಆಹಾರ ಸೇವನೆ ಸಾಧ್ಯವಾಗದಿದ್ದರೆ, ಸಿದ್ಧಪಡಿಸಿದ ಪೋಷಕಾಂಶವುಳ್ಳ ಆಹಾರ ತೆಗೆದುಕೊಳ್ಳಬಹುದು. ಯಂತ್ರೋಪಕರಣಗಳ ಮೂಲಕ ಪೋಷಕಾಂಶ ಆಹಾರ ಸಿದ್ಧಪಡಿಸಿ ಸಣ್ಣ ಉದ್ಯಮ ಆರಂಭಿಸಲು ರೈತರು ಮುಂದಾಗಬೇಕು.
ಈಗಾಗಲೇ ನಮ್ಮ ಕೇಂದ್ರದಲ್ಲಿ ತಾಂತ್ರಿಕ ಮಾಹಿತಿ ಪಡೆದ ರೈತರು ಮೌಲ್ಯವರ್ಧಿತ ನುಗ್ಗೆ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ನೇರಳೆ ಹಣ್ಣಿನ ಉಪ ಉತ್ಪನ್ನ ತಯಾರಿಸಲು ರೈತರು ಮುಂದಾಗಬೇಕು ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಮುತ್ತುರಾಜ ಮಾತನಾಡಿ, ಕೌಶಲಾಭಿವೃದ್ಧಿ ಕಾರ್ಯಾಗಾರದ ಸದುಪಯೋಗ ಪಡೆದು ರೈತರು ಸ್ವಾವಲಂಬಿ ಜೀವನ ನಡೆಸಬೇಕು. ಬೆಳೆ ವಿಮೆ ಮಾಡಿಸುವ ಮೂಲಕ ಬರ ಪರಿಸ್ಥಿತಿಯ ಹಾನಿ ಪರಿಹಾರ ಪಡೆಯಲು ಮುಂದಾಗಬೇಕು ಎಂದರು.ಕೃಷಿ ವಿಜ್ಞಾನಿ ರೇಣುಕಾ ಬಿರಾದಾರ ಇತರರಿದ್ದರು.