ಬಿತ್ತಿದ ತೊಗರಿ-ಹತ್ತಿ ಬೆಳೆಗಳು ಹಾಳು

ದೇವದುರ್ಗದಲ್ಲಿ ಸಂಸದ ಜಿ.ಕುಮಾರನಾಯಕಗೆ ರೈತ ಸಂಘ ಮನವಿ ಸಲ್ಲಿಸಿತು.
ದೇವದುರ್ಗದಲ್ಲಿ ಸಂಸದ ಜಿ.ಕುಮಾರನಾಯಕಗೆ ರೈತ ಸಂಘ ಮನವಿ ಸಲ್ಲಿಸಿತು.
Published on
ದೇವದುರ್ಗ: ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ರಾಯಚೂರು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ಜಿ.ಕುಮಾರನಾಯಕಗೆ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಶುಕ್ರವಾರ ಮನವಿ ಸಲ್ಲಿಸಿತು.
ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆಯುತ್ತ ಬಂದರೂ ತಾಲೂಕು ಸೇರಿ ಜಿಲ್ಲೆಯಲ್ಲಿ ಎಲ್ಲಿಯೂ ಸಮರ್ಪಕವಾಗಿ ಮಳೆ ಬಿದ್ದಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. 
ಕೆಲವೆಡೆ ಬಿದ್ದ ಅಲ್ಪಸ್ವಲ್ಪ ಮಳೆ ನಂಬಿಕೊಂಡು ರೈತರು ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿ ವಿವಿಧ ಮುಂಗಾರು ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಬಿತ್ತಿದ ನಂತರ ಮಳೆಯಾಗದೆ ಬೆಳೆಗಳು ಹಾಳಾಗಿವೆ. ಜಲಾಶಯಗಳಲ್ಲಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಬರದ ಛಾಯೆ ಮೂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ರಾಯಚೂರು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು. ಅರಸಿಣಗಿ 33ಕೆವಿ ವಿದ್ಯುತ್ ಕೇಂದ್ರದಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಪರಿಶೀಲಿಸಿ ಸಮಸ್ಯೆ ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. 
ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಮುಖಂಡರಾದ ಮಲ್ಲೇಶ್ ನಾಯಕ, ನಾಗರಾಜ್ ತೆಗ್ಗಿಹಾಳ ಗೌರಂಪೇಟೆ, ರಮೇಶ್ ನಾಯಕ, ಬಸವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net