ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಿ

 ಡಿ.ಎಚ್.ಪೂಜಾರ್
ಡಿ.ಎಚ್.ಪೂಜಾರ್
Published on
ಸಿಂಧನೂರು: ಜಿಲ್ಲಾಡಳಿತ ಹಾಗೂ ಶಾಸಕರು ಶೀಘ್ರ ಸಭೆ ಕರೆದು, ಕಳೆದ 16 ತಿಂಗಳಿಂದ ಸಂಕಷ್ಟ ಎದುರಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿ ಸಂಚಾಲಕ ಡಿ.ಎಚ್.ಪೂಜಾರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕು ಹಾಗೂ ಜಿಲ್ಲಾಡಳಿತ ಬಡ ವ್ಯಾಪಾರಿಗಳ ಕೂಗನ್ನು ಕೇಳಿಸಿಕೊಳ್ಳದ ಕಾರಣ ಏ.13ರಿಂದ ಧರಣಿ ನಡೆಸಲಾಗುತ್ತಿದೆ. ಆದಾಗ್ಯೂ ಯಾವುದೇ ಸ್ಪಂದನೆ ದೊರೆತಿಲ್ಲ. 
ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರಿ ಹಣ್ಣಿನ ತೋಟದ ಕಾಂಪೌಂಡ್‌ಗೆ ಹೊಂದಿಕೊಂಡು 10 ಫೀಟ್ ಒಳಗಡೆ ಡಬ್ಬಾ ಅಂಗಡಿಗಳನ್ನು ಇಟ್ಟುಕೊಳ್ಳಲು ಹೇಳಿದ್ದರು. ಅವರ ಮೌಖಿಕ ಆದೇಶದ ಪ್ರಕಾರ ಏ.23ರಂದು ಎಂಟ್ಹತ್ತು ಡಬ್ಬಾ ಅಂಗಡಿಗಳನ್ನು ಇಡಲಾಗಿತ್ತು. ಆದರೆ, ಏ.24 ರಂದು ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ಸಿಬ್ಬಂದಿಯೊಂದಿಗೆ ಜೆಸಿಬಿ ಯಂತ್ರದ ಮೂಲಕ ಅಂಗಡಿಗಳನ್ನು ತೆರವುಗೊಳಿಸಿದರು ಎಂದರು. 
ಹೈಕೋರ್ಟ್ ಮತ್ತು ಭೂಕಬಳಿಕೆ ನಿಷೇದ ಕೋರ್ಟ್ ಆದೇಶದ ಪ್ರಕಾರ ಗಂಗಾವತಿ ರಸ್ತೆಯ ಮಧ್ಯದಿಂದ 15 ಮೀಟರ್ ಬಿಟ್ಟು ಇನ್ನು 25 ಅಡಿ ಜಾಗ ಉಳಿಯುತ್ತದೆ. 10 ಅಡಿ ಅಂತರದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡರೂ ಇನ್ನೂ 15 ಅಡಿ ಜಾಗ ಖಾಲಿ ಉಳಿಯುತ್ತದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಆದರೆ, ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ ಎಂದರು.
ಸಮುದಾಯ ಸಂಘಟನೆ ಅಧ್ಯಕ್ಷ ಎಸ್.ದೇವೇಂದ್ರಗೌಡ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಡಬ್ಬಾ ಅಂಗಡಿಗಳನ್ನು ಇಡುವ ಸ್ಥಳ ರಸ್ತೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಟ್ರಾಫಿಕ್ ಹೆಚ್ಚಿ ಅಪಘಾತಗಳಾಗುತ್ತವೆ ಎಂದು ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು. ಪ್ರಮುಖರಾದ ಬಿ.ಎನ್.ಯರದಿಹಾಳ, ಕಾಸಿಂಸಾಬ್, ಮಂಜುನಾಥ ಗಾಂಧಿನಗರ, ರಸೂಲ್‌ಸಾಬ್, ಹುಸೇನಸಾಬ್, ಚಂದ್ರಶೇಖರ ಗೊರಬಾಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net