ಮಸ್ಕಿ: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಪೀಠದಲ್ಲಿ ಮಂಗಳವಾರ ಮಾಲಾಧಾರಿಗಳ ಇರುಮುಡಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಮಾಲಾಧಾರಿಗಳು ಪೂಜೆ ಹಾಗೂ ಭಜನೆಯಲ್ಲಿ ತೊಡಗಿದರು. 90ಕ್ಕೂ ಹೆಚ್ಚು ಮಾಲಾಧಾರಿಗಳ ಇರುಮುಡಿ ಪೂಜೆ ಗುರುಸ್ವಾಮಿಗಳಾದ ರಾಘವೇಂದ್ರ ಚಿನ್ನಿ, ಶೇಖರಪ್ಪಗೌಡ ಪೋಲೀಸ್ ಪಾಟೀಲ ಹಾಗೂ ಮಲ್ಲಯ್ಯ ಬಳಿಗಾರ ಮಾಡಿದರು.
ಸಂಜೆ ಗುರುಸ್ವಾಮಿಗಳು ಶಬರಿಗಿರಿಯ ಯಾತ್ರೆಗೆ ಚಾಲನೆ ನೀಡಿದರು. 18 ವರ್ಷ ಮಾಲೆಧರಿಸಿದ ಬಸವರಾಜ ಕಡಬೂರು ಅವರು ಅಯ್ಯಪ್ಪಸ್ವಾಮಿಯ ಪೂಜಾಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಮಾಲಾಧಾರಿಗಳು ದೇವಸ್ಥಾನದಿಂದ ಪಟ್ಟಣದ ಹಳೇ ಬಸ್‌ನಿಲ್ದಾಣ, ಅಶೋಕ ವೃತ್ತ, ಅಗಸಿ, ದೈವದಕಟ್ಟೆ ಸೇರಿ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ನಾಮಸ್ಮರಣೆ, ಭಜನೆ ಮಾಡುತ್ತಾ ಅದ್ದೂರಿಯಾಗಿ ಮೆರವಣಿಗೆ ಮಾಡಿದರು. ನಂತರ ಕನಕವೃತ್ತ ಹತ್ತಿರ ಪೂಜೆ ಸಲ್ಲಿಸಿದ ಬಳಿಕ 10 ಕ್ರೂಷರ್ ವಾಹನ ಹಾಗೂ 6 ಕಾರುಗಳು ಶಬರಿಗಿರಿ ಯಾತ್ರೆಗೆ ತೆರಳಿದವು.
ಬೆಳಿಗ್ಗೆಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಅಯ್ಯಪ್ಪಸ್ವಾಮಿಯ ಜಪ ಮಾಡುತ್ತಾ ಪೂಜೆಯಲ್ಲಿ ಪಾಲ್ಗೊಂಡು ಇರುಮುಡಿಯಲ್ಲಿ ಅಕ್ಕಿ ಮತ್ತು ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.