ವ್ಯಾಕರನಾಳ ಗ್ರಾಮದ ರಸ್ತೆ ಮಧ್ಯೆ ಸಂಗ್ರಹವಾದ ಕೊಳಚೆ ನೀರಿನಲ್ಲಿಯೇ ಬೈಕ್ ಸವಾರರು ಸಂಚರಿಸುತ್ತಿರುವುದು.
Published on:
Copied
Follow Us
ಮುದಗಲ್: ವ್ಯಾಕರನಾಳ ಗ್ರಾಮದ ಮುಖ್ಯರಸ್ತೆಯಲ್ಲಿಯೇ ಚರಂಡಿ ನೀರು ನಿಲ್ಲುತ್ತಿದ್ದರಿಂದ ಅಂಕಲಿಮಠ, ನಾಗಲಾಪುರ ಗ್ರಾಮಗಳಿಗೆ ತೆರಳುವ ಬೈಕ್ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ನಾಗಲಾಪುರ ಗ್ರಾಪಂ ವ್ಯಾಪ್ತಿಯ ವ್ಯಾಕರನಾಳದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದ ಕಾರಣ ಕೊಳಚೆ ನೀರು ರಸ್ತೆ ಮಧ್ಯೆಯೇ ನಿಲ್ಲುತ್ತಿದ್ದು, ವಾತಾವರಣ ಕಲುಷಿತಗೊಂಡಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.
ಸುಕ್ಷೇತ್ರ ಅಂಕಲಿಮಠಕ್ಕೆ ತೆರಳುವ ನೂರಾರು ಭಕ್ತರು ಮಲಿನ ನೀರಿನಲ್ಲಿಯೇ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಕೊಳಚೆ ನೀರು ರಸ್ತೆ ಪಕ್ಕಕ್ಕೆ ಹರಿಸಲು ಹೊಲಗಳ ಮಾಲೀಕರು ತಕರಾರು ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಚರಂಡಿ ನೀರು ಮುಖ್ಯರಸ್ತೆಯಲ್ಲಿ ಸಂಗ್ರಹವಾಗಿ ಸಮಸ್ಯೆ ಉಂಟು ಮಾಡಿದೆ.
ಕೆಲವರು ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳು ಕೂಡ ಇವೆ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ತಿಂಗಳುಗಟ್ಟಲೆ ಒಂದೇ ಕಡೆ ಕಲುಷಿತ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಆದ್ದರಿಂದ ಪಂಚಾಯಿತಿ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ವ್ಯಾಕರನಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
"
ವ್ಯಾಕರನಾಳ ಗ್ರಾಮದಲ್ಲಿ ರಸ್ತೆ ಮಧ್ಯೆ ಸಂಗ್ರಹವಾದ ಕೊಳಚೆ ನೀರನ್ನು ಸ್ಥಳಾಂತರಿಸಲು ತಾಂತ್ರಿಕ ತೊಂದರೆ ಎದುರಾಗಿದೆ. ಅಧಿಕಾರಿಗಳ ಮಾರ್ಗದರ್ಶನ ಪಡೆದು ಗ್ರಾಮಸ್ಥರೊಡನೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.