ಸಿಂಧನೂರಿನ ರೈತ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಪಿಐ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಮಾತನಾಡಿದರು. ಸಹಕಾರ್ಯದರ್ಶಿ ಸಂತೋಷ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಎಐಟಿಯುಸಿ ವೆಂಕನಗೌಡ ಗದ್ರಟಗಿ ಇದ್ದರು.
ಸಿಂಧನೂರು: ದುಡಿಯುವ ವರ್ಗದ ಸಮುದಾಯಗಳ ಹಿತಾಸಕ್ತಿ ಕಾಪಾಡಲು ನಿಸ್ವಾರ್ಥದಿಂದ ಶ್ರಮಿಸಿದರೆ ಪಕ್ಷದ ಸಂಘಟನೆ ವೃದ್ಧಿಯಾಗಲು ಸಾಧ್ಯ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿ ಅತ್ಯಂತ ಕ್ರೂರ ಮತ್ತು ಅಮಾನವೀಯವಾಗಿದೆ. ಇದರಿಂದ ಭಾರತ ಸೇರಿ ಇತರ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ.
ಇತಿಹಾಸದುದ್ದಕ್ಕೂ ಅಮೆರಿಕ ಹಿಂದುಳಿದ ಮತ್ತು ಪ್ರಗತಿಶೀಲ ರಾಷ್ಟ್ರಗಳ ಮೇಲೆ ದಮನಕಾರಿ ನೀತಿ ಅನುಸರಿಸುತ್ತ ಬಂದಿದೆ. ಸಹಸ್ರಾರು ಜನರ ಬಲಿ ತೆಗೆದುಕೊಂಡಿರುವ ಅಮೆರಿಕ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸದೇ ಭಾರತದ ವಿದೇಶಾಂಗ ನೀತಿಯ ಪರಂಪರೆಯನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಘಟಕದ ಸಹಕಾರ್ಯದರ್ಶಿ ಸಂತೋಷ ಮಾತನಾಡಿ, ಪಕ್ಷದ ಸದಸ್ಯತ್ವದ ಹೆಚ್ಚಳ ಮತ್ತು ಪಕ್ಷದ ಸಿದ್ದಾಂತವನ್ನು ಜನಮಾನಸಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಎಐಟಿಯುಸಿ ಮುಖಂಡರಾದ ವೆಂಕನಗೌಡ ಗದ್ರಟಗಿ, ಬಾಷುಮಿಯಾ, ಡಿ.ಎಚ್.ಕಂಬಳಿ, ಸಂಗಯ್ಯ ಹಿರೇಮಠ, ಜಗದೀಶ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ತಿಮ್ಮಣ್ಣ, ಕಿಸಾನಸಾಬ್, ಹುಲುಗಪ್ಪ, ಚನ್ನಮ್ಮ ಮಾನ್ವಿ, ಲಕ್ಷ್ಮೀ ಇತರರಿದ್ದರು.