ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆ ಸನ್ನದ್ಧ

dr.k.d.badiger
dr.k.d.badiger
Published on

ಪ್ರಮುಖ ಮುಖ್ಯಾಂಶಗಳು

  • 101 ಕೇಂದ್ರಗಳಲ್ಲಿ 33635 ವಿದ್ಯಾರ್ಥಿಗಳು ನೋಂದಣಿ
  • ಸಿಸಿಟಿವಿ ಕ್ಯಾಮೆರಾ ಅಳವಡಿಕೆ
  • ಅಧಿಕಾರಿಗಳ ತಂಡ ರಚನೆ
ರಾಯಚೂರು
ನಗರ ಸೇರಿದಂತೆ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಾ.18 ರಿಂದ ಏ.2 ರವರೆಗೆ ನಡೆಯುವ ಪರೀಕ್ಷೆಗೆ ಈ ಬಾರಿ 101 ಪರೀಕ್ಷಾ ಕೇಂದ್ರದಲ್ಲಿ 33,635 ಪರೀಕ್ಷೆ ಬರೆಯಲಿದ್ದಾರೆ.
ಈ ಬಾರಿಯೂ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಯಲಿದ್ದು, ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ತಲುಪಿಸುವ ಕೆಲಸ ಮುಗಿಸಿದ್ದಾರೆ.
ಜಿಲ್ಲೆಯಲ್ಲಿ ಎಷ್ಟು ಪರೀಕ್ಷೆ ಕೇಂದ್ರಗಳು
ಜಿಲ್ಲಾದ್ಯಂತ ಸುಮಾರು101 ಪರೀಕ್ಷೆ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ ದೇವದುರ್ಗ ತಾಲೂಕಿನಲ್ಲಿ 15 ಕೇಂದ್ರಗಳು, ಲಿಂಗಸುಗೂರು 20 ಕೇಂದ್ರಗಳು, ಮಾನ್ವಿ 20 ಕೇಂದ್ರಗಳಲ್ಲಿ, ರಾಯಚೂರು ತಾಲೂಕಿನ 27 ಕೇಂದ್ರಗಳು, ಸಿಂಧನೂರಿನ 19 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಒಂದು ಕೊಠಡಿಯಲ್ಲಿ 24 ವಿದ್ಯಾಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ ಸಹ ಮಾಡಲಾಗಿದೆ.
ಎಷ್ಟು ವಿದ್ಯಾರ್ಥಿಗಳ ನೊಂದಣಿ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 33,635 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ದೇವದುರ್ಗ ತಾಲೂಕಿನಲ್ಲಿ 4,737 , ಲಿಂಗಸುಗೂರು ತಾಲೂಕಿನಲ್ಲಿ 65,70, ಮಾನ್ವಿ ತಾಲೂಕಿನ 5,989, ರಾಯಚೂರು ತಾಲೂಕಿನಲ್ಲಿ 10269 ಹಾಗೂ ಸಿಂಧನೂರು ತಾಲೂಕಿನಲ್ಲಿ 6070 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ 101 ಜನ ಕೇಂದ್ರದ ಮುಖ್ಯಸ್ಥರು ಹಾಗೂ 101 ಜನರನ್ನು ಜಾಗೃತ ದಳದ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ಜತೆಗೆ 101 ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 40 ರಸ್ತೆ ಮಾರ್ಗಗಳನ್ನು ಮಾಡಲಾಗಿದ್ದು, ಪ್ರತಿಯೊಂದು ಮಾರ್ಗಕ್ಕೆ ನೂಡಲ್ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಕಲು ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ವೆಬ್‌ಕಾಸ್ಟಿಂಗ್ ನಡೆಸಿ ಪರೀಕ್ಷೆಯ ಮೇಲೆ ನಿಗಾ ಇಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹಾಗೂ ಪ್ರತಿ ತಾಲೂಕಿನಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೆಬ್ ಕಾಸ್ಟಿಂಗ್ ಕಾರ್ಯವನ್ನು ಶಿಕ್ಷಣ ಇಲಾಖೆಯಿಂದ ನಿಯೋಜಿಸಲಾದ ಒಂದು ತಂಡ ವೀಕ್ಷಣೆ ಮಾಡುತ್ತದೆ. ಈ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 101 ಪರೀಕ್ಷ ಕೇಂದ್ರಗಳಲ್ಲಿನ ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗಿದೆ.
ಅಧಿಕಾರಿಗಳ ತಂಡ ರಚನೆ
ಪರೀಕ್ಷೆಯಲ್ಲಿ ಅಕ್ರಮಗಳು ಜರುಗದಂತೆ ಮತ್ತು ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಾರ್ಯವೂ ಕೂಡ ಇರಲಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತುಪಡಿಸಿ ಯಾರೂ ಕೂಡ ಓಡಾಡದಂತೆ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನಿರ್ವಹಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತತ್ವದಲ್ಲಿ, ಜಿಲ್ಲಾ ಖಜಾನೆ ಮತ್ತು ಡಿಡಿಪಿಯು ಒಳಗೊಂಡಂತೆ ಅಧಿಕಾರಿಗಳ ತಂಡ ರಚಿಸಲಾಗಿದೆ. 40ಮೀ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಪ್ರದೇಶವನ್ನು ನಿಷೆೇಧಿತ ಪ್ರದೇಶವೆಂದು ತಿಳಿಸಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್‌ಗಳನ್ನು ಮುಚ್ಚಿಸುವ ಆದೇಶವನ್ನು ಹೊರಡಿಸಲಾಗಿದೆ.

ಮಾ.18 ರಿಂದ ಏ.4 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ .ಪರೀಕ್ಷೆಯಲ್ಲಿ ಆಕ್ರಮ ನಡೆಯದಂತೆ ಜಿಲ್ಲೆಯ 101 ಪರೀಕ್ಷೆ ಕೇಂದ್ರದಲ್ಲಿ ವೆಬ್ ಕಾಸ್ಟೀಂಗ್ ಜತೆಗೆ 101 ಜನ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.
ಡಾ.ಕೆ.ಡಿ.ಬಡಿಗೇರ್ ಡಿಡಿಪಿಐ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net