ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ

ಸಿಂಧನೂರಿನಲ್ಲಿ ಬಸನಗೌಡ ಬಾದರ್ಲಿ ಫೌಂಡೇಷನ್‌ದಿಂದ ಆಯೋಜಿಸಿದ್ದ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನೂರ್ ಮಹ್ಮದ್ ಉದ್ಘಾಟಿಸಿದರು. ಎಂಎಲ್‌ಸಿ ಬಸನಗೌಡ ಬಾದರ್ಲಿ, ಬಿಸಿಎಂ ಅಧಿಕಾರಿ ಲಿಂಗಪ್ಪ ಅಂಗಡಿ, ವೈಜನಾಥ ಹಿರೇಮಠ ಇತರರಿದ್ದರು.
ಸಿಂಧನೂರಿನಲ್ಲಿ ಬಸನಗೌಡ ಬಾದರ್ಲಿ ಫೌಂಡೇಷನ್‌ದಿಂದ ಆಯೋಜಿಸಿದ್ದ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನೂರ್ ಮಹ್ಮದ್ ಉದ್ಘಾಟಿಸಿದರು. ಎಂಎಲ್‌ಸಿ ಬಸನಗೌಡ ಬಾದರ್ಲಿ, ಬಿಸಿಎಂ ಅಧಿಕಾರಿ ಲಿಂಗಪ್ಪ ಅಂಗಡಿ, ವೈಜನಾಥ ಹಿರೇಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ
  • ಎಂಎಲ್‌ಸಿ
  • ಸೂಚನೆ
ಸಿಂಧನೂರು:

ನಗರದಲ್ಲಿ ಬಸನಗೌಡ ಬಾದರ್ಲಿ ಫೌಂಡೇಷನ್‌ದಿಂದ ಭಾನುವಾರ ಆಯೋಜಿಸಿದ್ದ ವಸತಿ ನಿಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗಳು ಅನಾವರಣಗೊಂಡವು.

ಕುಡಿವ ನೀರು, ಆಹಾರ, ಸ್ವಚ್ಛತೆ, ಶೌಚಗೃಹ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಎಂಎಲ್‌ಸಿ ಎದುರು ಅಳಲು ತೋಡಿಕೊಂಡರು. ಸಮಸ್ಯೆಗಳನ್ನು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.
ಎಂಎಲ್‌ಸಿ ಬಾದರ್ಲಿ, ನಿಲಯದ ವ್ಯವಸ್ಥೆ ಕುರಿತು ವಾರ್ಡನ್‌ಗಳಿಂದ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿರುವ ವಾರ್ಡನ್‌ಗಳನ್ನು ತರಾಟೆಗೆ ತೆಗೆದುಕೊಂಡು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ವಿದ್ಯಾರ್ಥಿ ಚನ್ನಬಸವ ಮಾತನಾಡಿ, ವಸತಿ ನಿಲಯದಲ್ಲಿ ಫ್ಯಾನ್‌ಗಳಿಲ್ಲ. ಗ್ರಂಥಾಲಯ ವ್ಯವಸ್ಥೆ ಇಲ್ಲ. ಸಮಸ್ಯೆ ಹೇಳಿಕೊಂಡರೆ ವಾರ್ಡನ್ ಬೆದರಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ಸರಿಯಾದ ಪುಸ್ತಗಳಿಲ್ಲ. ದಿನಪತ್ರಿಕೆಗಳನ್ನು ಹಾಕಿಸುವುದಿಲ್ಲ. ಬೆಡ್‌ಶೀಟ್ ಇಲ್ಲ. ಅಶುದ್ಧ ನೀರಿನಿಂದ ಅಡುಗೆ ಮಾಡುತ್ತಾರೆ ಎಂದು ದೂರು ನೀಡಿದರು.
ವಾರ್ಡನ್ ಹುಚ್ಚರಡ್ಡಿ ಪ್ರತಿಕ್ರಿಯಿಸಿ, ವಸತಿ ನಿಲಯದಲ್ಲಿ ಕೆಲ ಸೌಲಭ್ಯ ಇಲ್ಲದಿರುವುದು ನಿಜ. ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆ ಪರಿಹರಿಸಿರುವೆ. ಆದರೆ, ವಿದ್ಯಾರ್ಥಿಗಳ ಕಿರಿಕಿರಿ ಹೆಚ್ಚಾಗಿದೆ. ಮೇನು ಹೊರತುಪಡಿಸಿದ ಅಡುಗೆ ಮಾಡಬೇಕು. ರೂಮ್‌ಗೆ ಹೋಗಿ ಊಟ ಕೊಡಬೇಕು ಎಂದು ಹೇಳುತ್ತಾರೆ. ರೂಮ್‌ಗಳಲ್ಲಿ ಗುಟ್ಖಾ ಚೀಟಿ, ಬಿಯರ್ ಬಾಟಲ್ ಬಿದ್ದಿರುತ್ತವೆ. ರಾತ್ರಿಯಿಡೀ ಮೊಬೈಲ್ ಬಳಕೆ ಮಾಡುತ್ತಾರೆ ಎಂದು ದೂರಿದರು. ಎಂಎಲ್‌ಸಿ ಬಸನಗೌಡ ಬಾದರ್ಲಿ ಮಾತನಾಡಿ, ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸೋಣ, ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡಬೇಕೆಂದರು.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿ ಅನಿಲಕುಮಾರ ಮಾತನಾಡಿ, ನಮ್ಮ ವಸತಿ ನಿಲಯದಲ್ಲಿ ದಿನಪತ್ರಿಕೆಗಳನ್ನು ತರಿಸುವುದಿಲ್ಲ.ಮೂಲ ಸೌಲಭ್ಯಗಳಿಲ್ಲ. ವಾರ್ಡನ್‌ಗೆ ಫೋನ್ ಮಾಡಿದರೆ ಸ್ವೀಚ್ ಆಫ್ ಮಾಡಿರುತ್ತಾರೆ ಎಂದು ದೂರಿದರು. ವಾರ್ಡನ್ ನಟರಾಜ ಮಾತನಾಡಿ, ವಿದ್ಯಾರ್ಥಿಗಳು ಕೊಠಡಿಗಳ ಬಾಗಿಲು ಮುರಿದಿದ್ದಾರೆ. ಫ್ಯಾನ್ ಕೆಡಿಸಿದ್ದಾರೆ. ಒಬ್ಬೊಬ್ಬ ವಿದ್ಯಾರ್ಥಿ 10 ರೊಟ್ಟಿ ಬೇಕೆಂದು ಹೇಳುತ್ತಾರೆ ಎಂದು ದೂರಿದರು.
ಎಂಎಲ್‌ಸಿ ಮಾತನಾಡಿ, ವಿದ್ಯಾರ್ಥಿಗಳು ಊಟ ಮಾಡುವುದನ್ನು ಹೇಳಬೇಡಿ, ಅವರ ಸಮಸ್ಯೆಗೆ ಸ್ಪಂದಿಸಬೇಕು. ಮಹಿಳಾ ವಸತಿ ನಿಲಯಕ್ಕೆ ಎಂಟು ತಿಂಗಳಿಂದ ಕಿಟ್ ಬಂದಿಲ್ಲವಂತೆ. ಈ ಬಗ್ಗೆ ನಮಗೆ ಮಾಹಿತಿ ನೀಡಬೇಕಿತ್ತು ಎಂದರು.
ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನೂರ್ ಮಹ್ಮದ್ ಮಾತನಾಡಿ, ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್ ಸಂಚಾರಕ್ಕೆ ಕ್ರಮವಹಿಸಲಾಗುವುದು. ವಸತಿ ನಿಲಯಗಳಿಂದ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದರು.
ಬಿಸಿಎಂ ಇಲಾಖೆ ಅಧಿಕಾರಿ ಲಿಂಗಪ್ಪ ಅಂಗಡಿ, ಪ್ರಾಧ್ಯಾಪಕ ವೈಜನಾಥ ಹಿರೇಮಠ, ಗಂಗನಗೌಡ ಪೊಲೀಸ್ ಪಾಟೀಲ್ ಬಸವರಾಜ ಆನೆಗುಂದಿ, ವಾರ್ಡನ್‌ಗಳು, ಅಧಿಕಾರಿಗಳು ಇದ್ದರು.
===========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net