ದೇವದುರ್ಗ: ಬಕ್ರೀದ್ ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿದೆ. ಈ ದಿನ ಪ್ರತಿಯೊಬ್ಬರೂ ಧರ್ಮ ಹಾಗೂ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕು ಎಂದು ಮುಸ್ಲಿಂ ಧರ್ಮಗುರು ಮುಖ್ತಿ ಮೌಲಾನಾ ಮಹಿಬೂಬ್ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ ನಂತರ ಧರ್ಮ ಉಪದೇಶ ನೀಡಿದರು. ಈ ವರ್ಷ ಉತ್ತಮ ಮಳೆ ಬೆಳೆ ಬರುವ ಜತೆಗೆ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥನೆ ಮಾಡಲಾಗಿದೆ. ಮುಸ್ಲಿಮರು ಸಮಾಜದ ಇತರ ಜನರೊಂದಿಗೆ ಶಾಂತಿ ಸೌಹಾರ್ದದಿಂದ ಬದುಕು ಕಟ್ಟಿಕೊಳ್ಳಬೇಕು. ಬದುಕು ದೇವರ ಕೊಟ್ಟಿರುವ ಅವಕಾಶವಿದ್ದು, ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯಗಳು ವಿನಿಮಯ ಮಾಡಿಕೊಂಡರು. ವಿವಿಧ ಪಕ್ಷದ ರಾಜಕೀಯ ನಾಯಕರು ಮುಸ್ಲಿಮರಿಗೆ ಶುಭಾಶಯ ಕೋರಿದರು.