ಮಸ್ಕಿ: ಗ್ರಾಮ ಪಂಚಾಯಿತಿಗಳಿಗೆ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಕಳೆದೊಂದು ವರ್ಷದಿಂದ ಸಮರ್ಪಕವಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಕುಡಿವ ನೀರಿನ ಮೋಟರ್ ರಿಪೇರಿ, ಪೈಪ್ ಲೈನ್ ಅಳವಡಿಕೆ ಮತ್ತು ಬೀದಿ ದೀಪಗಳ ನಿರ್ವಹಣೆ ಕಷ್ಟವಾಗಿದೆ. ರಾಜ್ಯದ ಶೇ.70 ಪಂಚಾಯತಿಗಳಲ್ಲಿ ಕನಿಷ್ಠ 5 ಲಕ್ಷ ರೂ.ಯಿಂದ 20 ಲಕ್ಷ ರೂ.ವರೆಗೆ ಬಿಲ್ ಬಾಕಿ ಇದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಪಿಡಿಒಗಳು ಸ್ಥಳೀಯ ಏಜೆನ್ಸಿಗಳಿಂದ ಸಾಲದ ರೂಪದಲ್ಲಿ ಸಾಮಗ್ರಿ ಪಡೆದು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಈಗ ಹಳೆಯ ಬಾಕಿ ಹಣ ಪಾವತಿಯಾಗದ ಕಾರಣ ಹೊಸ ಸಾಮಗ್ರಿಗಳನ್ನು ನೀಡುತ್ತಿಲ್ಲ ಎಂದು ಅಲವತ್ತುಕೊಂಡರು.
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ನೇರವಾಗಿ ಪಿಡಿಒಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ. ಆರ್ಥಿಕ ಬಿಕ್ಕಟ್ಟು ನಿರ್ವಹಣೆ, ಬಿಲ್ ಪಾವತಿಗೆ ಕೆಟಿಪಿಪಿ ಕಾಯ್ದೆಯಿಂದ ವಿಶೇಷ ವಿನಾಯಿತಿ ಮತ್ತು ಪಿಡಿಒಗಳ ಒತ್ತಡ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.