ತಾಪಂ ಇಒಗಳಿಗೆ ಶಾಸಕಿ ಕರೆಮ್ಮ ಜಿ.ನಾಯಕ ಸೂಚನೆ ಸೌಜನ್ಯ ಮರೆತ ಅಣ್ಣರಾವ್
ದೇವದುರ್ಗ: ಕುಡಿವ ನೀರು ಪೂರೈಕೆಯಲ್ಲಿ ನಿಷ್ಕಾಳಜಿ, ಜನರ ಸಮಸ್ಯೆ ಸ್ಪಂದಿಸದೆ ಇರುವುದು, ಗ್ರಾಪಂಗೆ ಬಾರದೆ ಸಂಪರ್ಕಕ್ಕೆ ಸಿಗದ ಪಿಡಿಒಗಳನ್ನು ತಕ್ಷಣವೇ ಅಮಾನತು ಮಾಡಲು ಶಿಫಾರಸು ಮಾಡುವಂತೆ ತಾಪಂ ಇಒಗಳಾದ ಬಸವರಾಜ ಹಟ್ಟಿ, ಅಣ್ಣರಾವ್ ನಾಯಕಗೆ ಶಾಸಕಿ ಕರೆಮ್ಮ ಜಿ.ನಾಯಕ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜರುಗಿದ ಕುಡಿವ ನೀರು ಪೂರೈಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆವಹಿಸಿ ಸೋಮವಾರ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಜನರ ಸಮಸ್ಯೆಗೆ ಸ್ಪಂದಿಸದ ಪಿಡಿಒಗಳನ್ನು ನೀವೇಕೆ ಸಹಿಸಿಕೊಂಡಿದ್ದೀರಿ. ನಿಮ್ಮ ಫೋನ್‌ಗೆ ಉತ್ತರಿಸದ, ಮಾತುಕೇಳದ ಪಿಡಿಒಗಳು ಯಾಕೇಬೇಕು ಎಂದು ಪ್ರಶ್ನಿಸಿದ ಶಾಸಕಿ, ತಕ್ಷಣವೇ ಅಂಥ ಪಿಡಿಒಗಳ ಪಟ್ಟಿಮಾಡಿ ವರದಿ ಕೊಡಿ. ನಾನು ಮೇಲಧಿಕಾರಿಗಳಿಗೆ ಸಲ್ಲಿಸಿ ಅಮಾನತು ಮಾಡಿಸುತ್ತೇನೆ ಎಂದು ಖಾರವಾಗಿ ಹೇಳಿದರು.
ದಿನೇ ದಿನೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಶುದ್ಧ ಕುಡಿವ ನೀರಿನ ವಿಷಯದಲ್ಲಿ ಪಿಡಿಒಗಳು ನಿರ್ಲಕ್ಷ್ಯ ಮಾಡಬಾರದು. ಅಶುದ್ಧ ನೀರು ಪೂರೈಕೆಯಿಂದ ಜಾಲಹಳ್ಳಿ, ಜಾಡಲದಿನ್ನಿ ಗ್ರಾಪಂನಲ್ಲಿ ನಡೆದ ಅವಘಡ ಮರುಕಳಿಸದಂತೆ ಎಚ್ಚರಿಕೆವಹಿಸಬೇಕು. ನೀರಿನ ಮೂಲಗಳ ರಕ್ಷಣೆಗೆ ಒತ್ತುಕೊಡಬೇಕು. ಬೋರ್‌ವೆಲ್ ರಿಪೇರಿ ಮಾಡಿ ಆರ್‌ಒ ಪ್ಲಾಂಟ್ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅಗತ್ಯವೆನಿಸಿದರೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯಿರಿ ಎಂದು ಸೂಚಿಸಿದರು.
ನದಿದಂಡೆ ಗ್ರಾಮಗಳಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು ಪಿಡಿಒಗಳು ಏನು ಮಾಡುತ್ತಿದ್ದೀರಿ. ಮರಳು ರಕ್ಷಣಾ ಸಮಿತಿಯಲ್ಲಿ ಪಿಡಿಒಗಳು ಸದಸ್ಯರಿದ್ದು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಹಾಳಾಗುತ್ತಿವೆ. ಇಸ್ಪೀಟ್, ಮಟ್ಕಾ, ಮದ್ಯ ಮಾರಾಟ ತಡೆ ಕೇವಲ ಪೊಲೀಸರ ಕೆಲಸವಲ್ಲ. ನಿಮ್ಮದೂ ಪಾತ್ರವಿದ್ದು ಅವರಿಗೆ ಇಲ್ಲವೆ ನನಗೆ ಮಾಹಿತಿ ಕೊಡಬೇಕು. 15ನೇ ಹಣಕಾಸು ಯೋಜನೆಯ ಅನುದಾನ ಅಂಗವಿಕರಿಗೆ ಬಳಕೆಯಾಗುತ್ತಿಲ್ಲ. ನಿಮಗೆ ಇಷ್ಟ ಬಂದಂತೆ ಹಣ ಖರ್ಚು ಮಾಡದೆ ಅವರಿಗೆ ಪರಿಹರ ವಿತರಿಸಬೇಕು.
ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಹಣ ಜಮಾ ಆಗುತ್ತಿಲ್ಲ. ನೆಪಹೇಳದೆ ಬಡವರಿಗೆ ಹಣ ಜಮಾಮಾಡಿ. ಆಲ್‌ಲೈನ್ ಪ್ರಾಬ್ಲಂ, ಪೆಂಡಿಂಗ್, ನೆಟ್‌ವರ್ಕ್, ಜಿಪಿಎಸ್ ನೆಪಹೇಳಬೇಡಿ. ಈ ವಿಚಾರದಲ್ಲಿ ಬಡವರನ್ನು ಗೊಳಾಡಿಸಿದರೆ ನಾನು ಸಹಿಸಲ್ಲ. ತಕ್ಷಣವೇ ಕಂತಿನ ಹಣಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ತಾಪಂ ಇಒಗಳಿಗೆ ಸೂಚನೆ ನೀಡಿದರು.
ಅರಕೇರಾ ತಾಪಂ ಇಒ ಅಣ್ಣರಾವ್ ನಾಯಕ, ಸಭೆ ನಡಾವಣೆ, ಸೌಜನ್ಯ ಮರೆತು ಪಿಡಿಒಗಳ ಮೇಲೆ ಏಕವಚನ ಪ್ರಯೋಗ ಮಾಡಿ ಶಾಸಕಿಗೆ ಇರಿಸುಮುರಿಸು ತಂದರು. ಗಲಗ ಪಿಡಿಒ ಶಿವಪುತ್ರಪ್ಪ ಮಾಹಿತಿ ವಿಚಾರವಾಗಿ ಅಣ್ಣರಾವ್ ಏಕವಚನದಲ್ಲಿ ಏನಲೇ ದಡ್ಡ, ಸಭೆಗೆ ಯಾಕೆಬಂದಿ ಅಂತಾ ತರಾಟೆ ತೆಗೆದುಕೊಂಡರು. ದೊಂಡಂಬಳಿ ಪಿಡಿಒ ಹನುಮಂತ, ಫೋನ್‌ಸ್ವೀಕರಿಸದ ಕಾರಣ ಮಾನಮರ್ಯಾದೆ ಇಟ್ಕೊಂಡು ಕೆಲಸ ಮಾಡಲೇ ದಡ್ಡ. ಕೆಲಸ ಮಾಡಲು ಆಗಲ್ಲ ಅಂದ್ರೆ ಇಲ್ಲಿಂದ ಹೋಗಲೇ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ತಾವೊಬ್ಬ ಅಧಿಕಾರಿಯಾಗಿ ಕೆಳಹಂತದ ಅಧಿಕಾರಿಗಳಿಗೆ ತುಂಬಿದ ಸಭೆಯಲ್ಲಿ, ಮಾಧ್ಯಮದ ಮುಂದೆ ಏಕವಚನದಲ್ಲಿ ಮಾತನಾಡಿದ್ದು ಶಾಸಕಿ ಕರೆಮ್ಮ ಜಿ.ನಾಯಕ ಸುಮ್ಮನೆ ಕುಳಿತು ಸಮ್ಮತಿಸಿದ್ದಕ್ಕೆ ಪಿಡಿಒಗಳು ಹೊರಬಂದು ಅಸಮಾಧಾನ ವ್ಯಕ್ತಪಡಿಸಿದರು.