

ರಾಯಚೂರು. ಜ.29 ರಿಂದ 31ರವರೆಗೆ ನಡೆಯಲಿರುವ ರಾಯಚೂರು ಉತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ರೀತಿಯಲ್ಲಿ ಸಿದ್ದತೆಗಳು ನಡೆಯುತ್ತಿದ್ದು, ಇನ್ನಷ್ಟು ಚುರುಕುಗೊಳ್ಳಬೇಕು. ಮುಖ್ಯವಾಗಿ ಜನೋತ್ಸವ ರೀತಿಯಲ್ಲಿ ಉತ್ಸವ ನಡೆಸಲು ಜಿಲ್ಲಾಡಳಿತವು ಬದ್ಧವಾಗಿದೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಮೂರನೇ ಸುತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಮಗೂ ಉತ್ಸವದ ಕಾರ್ಯ ವಹಿಸಿ ಎಂದು ತಿಳಿಸುವ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ, ಗಣ್ಯರ, ನಾಗರಿಕರ, ಯುವಕರ, ನೌಕರರ ಅಭಿಲಾಷೆಯಂತೆ ಎಲ್ಲರ ಸಹಭಾಗಿತ್ವದೊಂದಿಗೆ ಉತ್ಸವ ನಡೆಯುವಂತೆ ಕಾರ್ಯಯೋಜನೆ ರೂಪಿಸಿ ಸಂಬಂಧಿಸಿದ ಆಯಾ ಸಮಿತಿಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಕವಿಗಳು, ಲೇಖಕರು, ಚಿಂತಕರು ಮತ್ತು ಬುದ್ಧಿಜೀವಗಳ ಮತ್ತು ಜಾನಪದ ಸೇರಿದಂತೆ ಎಲ್ಲ ಬಗೆಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಸಿಗಬೇಕು. ಈ ಕಾರ್ಯವನ್ನು ಆಯಾ ಸಮಿತಿಯ ಸದಸ್ಯರು ಪಾರದರ್ಶಕವಾಗಿ ಮಾಡಬೇಕು. ಪುಸ್ತಕ ಓದುವ ಸಂಸ್ಕೃತಿಗೆ ಆದ್ಯತೆ ಸಿಗುವ ದಿಶೆಯಲ್ಲಿ ಪುಸ್ತಕ ಪ್ರದರ್ಶನ ಮಳಿಗೆ ನಿರ್ಮಾಣ ಸೇರಿದಂತೆ ನಾನಾ ಬಗೆಯ ಕಾರ್ಯಗಳ ಮೂಲಕ ಉತ್ಸವವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಎಲ್ಲ ಅತಿಥಿ ಗಣ್ಯರಿಗೆ ಶಿಷ್ಠಾಚಾರದಂತೆ ಉತ್ಸವಕ್ಕೆ ಆಹ್ವಾನಿಸುವ ಕಾರ್ಯವಾಗಬೇಕು. ನಗರದ ರೈಲ್ವೆ ನಿಲ್ದಾಣ, ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಸಿ ಪ್ರಚಾರ ಕಾರ್ಯಕ್ಕೆ ಒತ್ತು ಕೊಡಬೇಕು. ಹೊರಗಡೆಯಿಂದ ಉತ್ಸವಕ್ಕೆ ಆಗಮಿಸುವ ಕಲಾವಿದರು ಮತ್ತು ಇನ್ನೀತರರಿಗೆ ಸರಿಯಾದ ರೀತಿಯಲ್ಲಿ ವಸತಿ ಗೃಹಗಳ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಉತ್ಸವದಲ್ಲಿ ಕೃಷಿ, ಕರಕುಶಲ, ಫಲಪುಷ್ಪ, ಆಹಾರ ಮೇಳ, ಮತ್ಸ್ಯ ಮೇಳ, ಚಿತ್ರಕಲೆ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಪ್ರದರ್ಶನಗಳು ಅಚ್ಚುಕಟ್ಟಾಗಿ ನಡೆಯಬೇಕು. ರೈತರನ್ನು ಆಕರ್ಷಿಸುವ ಕೃಷಿ ಉತ್ಸವ ಆಯೋಜಿಸಬೇಕು ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ರಾಯಚೂರು ಉತ್ಸವ ಹಿನ್ನೆಲೆಯಲ್ಲಿ ಈಗಾಗಲೇ ರಾಯಚೂರು ಸಿಟಿಯ ಸೌಂದರ್ಯೀಕರಣ ಕಾರ್ಯ ಭರ್ಜರಿ ನಡೆದಿದೆ. ರಸ್ತೆ ಅಗಲೀಕರಣ, ದುರಸ್ಥಿ ಕಾರ್ಯ ನಡೆದಿದ್ದು ಜನತೆ ಸಹಕಾರ ನೀಡಬೇಕು. ನಗರದ ಎಲ್ಲ ಮುಖ್ಯರಸ್ತೆಗಳು ಸುಂದರವಾಗಿ ಕಾಣುವಂತೆ ಪಾಲಿಕೆ ಕೈಗೊಂಡ ಕಾರ್ಯಕ್ಕೆ ಜನತೆ ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು ಈಗಿನಿಂದಲೇ ರಾಯಚೂರು ಉತ್ಸವದ ಅಲಂಕಾರ ಕಾರ್ಯಕ್ಕೆ ಕಾರ್ಯಯೋಜನೆ ರೂಪಿಸಿ ಸಹಕರಿಸಬೇಕು ಎಂದು ಎಲ್ಲ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಡಿಸಿ ಶಿವಾನಂದ, ಎಸಿ ಡಾ.ಹಂಪಣ್ಣ ಸಜ್ಜನ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಯೋಜನಾ ನಿರ್ದೇಶಕ ಶರಣಬಸವರಾಜ್, ತಹಸೀಲ್ದಾರರಾದ ಸುರೇಶ್ ವರ್ಮ, ಅಮರೇಶ ಬಿರಾದಾರ ಸೇರಿ ಅನೇಕರು ಇದ್ದರು.