ರಾಯಚೂರು ಬಂದ್ ಉತ್ತಮ ಪ್ರತಿಕ್ರಿಯೆ

ಬಂದ್ ಹಿನ್ನಲೆಯಲ್ಲಿ  ರಾಯಚೂರಿನ ಬಟ್ಟೆ ಬಜಾರ್ ಸಂಪೂರ್ಣ ಬಂದ್ ಅಗಿರುವುದು.
ಬಂದ್ ಹಿನ್ನಲೆಯಲ್ಲಿ ರಾಯಚೂರಿನ ಬಟ್ಟೆ ಬಜಾರ್ ಸಂಪೂರ್ಣ ಬಂದ್ ಅಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 10 ಕಿಮೀ ದೂರದಲ್ಲಿ ವಾಹನ ಸಂಚಾರ ಸ್ಥಗಿತ
  • ಮೂರು ಆತ್ಮಹತ್ಯೆಗೆ ಯತ್ನ
  • ಸಂಚಾರಕ್ಕೆ ಸಾರ್ವಜನಿಕರ ಪರದಾಟ
ರಾಯಚೂರು ಪೂರ್ಣ ಪ್ರಮಾಣದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಕರೆ ನೀಡಿದ್ದ ರಾಯಚೂರು ಬಂದ್‌ಗೆ ಬುಧವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಬೆಳಗ್ಗೆಯಿಂದಲೇ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪ್ರಮುಖ ವ್ಯಾಪಾರ ವಲಯಗಳಾದ ಕಿರಾಣಿ ಅಂಗಡಿಗಳು, ಸರಾಫ್ ಮಾರುಕಟ್ಟೆ ಸೇರಿದಂತೆ ವಿವಿಧ ವ್ಯಾಪಾರ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದವು. ಪೆಟ್ರೋಲ್ ಬಂಕ್‌ಗಳೂ ಬಹುತೇಕ ಮುಚ್ಚಿದ್ದರಿಂದ ವಾಹನ ಸಂಚಾರ ಕಡಿಮೆಯಾಗಿತ್ತು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಖಾಸಗಿ ಮತ್ತು ಆಟೋ ರಿಕ್ಷಾಗಳ ಸಂಚಾರವೂ ಕಾಣಿಸದೆ ನಗರದಲ್ಲಿ ಸಾಮಾನ್ಯ ದಿನಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಸಂಚಾರ ಕಂಡುಬಂದಿತು.
ಬಸ್ ಮತ್ತು ಆಟೋ ಸಂಚಾರ ಇಲ್ಲದ ಕಾರಣ ಇತರೆ ತಾಲೂಕುಗಳು ಹಾಗೂ ಜಿಲ್ಲೆಗಳಿಂದ ಬಂದಿದ್ದ ಕೆಲ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು ಸಾರಿಗೆ ಸೌಲಭ್ಯ ಇಲ್ಲದೇ ಕೆಲವರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುವ ಸ್ಥಿತಿ ಎದುರಾಯಿತು. ಬಂದ್ ಹಿನ್ನಲೆಯಲ್ಲಿ ಕೇಲ ಶಾಲಾ ಕಾಲೇಜುಗಳು ಹಾಗೂ ಬ್ಯಾಂಕ್‌ಗಳ ಕಾರ್ಯ ಸ್ಥಗಿತಗೊಳಿಸಲಾಯಿತು. ನಗರದಲ್ಲಿ ಶಿಕ್ಷಣ ಹಾಗೂ ವಾಣಿಜ್ಯ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ದ್ವಿತೀಯ ಪಿಯುಸಿ ಪರೀಕ್ಷೆಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಲಿಲ್ಲ. ಬಂದ್ ನಿಮಿತ್ತ ಮಾದಿಗ ಸಮಾಜ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿಯ ಯುವಕರ ಗುಂಪುಗಳು ನೂರಾರು ಬೈಕ್ ಮೂಲಕ ನಗರದ ಅನೇಕ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಕ್ಯಾಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಹಾಗೂ ನೇಮಕಾತಿಗಳಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
10 ಕಿಮೀ ದೂರದಲ್ಲಿ ವಾಹನ ಸಂಚಾರ ಸ್ಥಗಿತ
ರಾಯಚೂರು ಬಂದ್ ಅಂಗವಾಗಿ ನಗರದಲ್ಲಿ ಯಾವುದೇ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ತಾಲೂಕಿನ ಮಿಟ್ಟಿ ಮಲ್ಕಾಪುರ, ಸಾಥ್ ಮೈಲ್, ಶಕ್ತಿ ನಗರದಲ್ಲಿ ಬಸ್ ಹಾಗೂ ಸರಕು ಸಾಗಣಿಕೆ ಮಾಡುವ ಬೃಹತ್ ವಾಹನಗಳನ್ನು ನಿಲ್ಲಿಸಿದ್ದರಿಂದ ಸಾರ್ವಜನಿಕರು 10 ಕೀಮಿ ನಡೆದುಕೊಂಡೆ ನಗರ ಪ್ರವೇಶ ಮಾಡುವ ಸ್ಥಿತಿ ಎದುರಾಯಿತು. ಜತೆಗೆ ಶ್ರೀಶೈಲಕ್ಕೆ ಬಸ್‌ನಲ್ಲಿ ಪ್ರಯಾಣಿಸುವವರು ಬಿರು ಬಿಸಿಲಿನಲ್ಲಿ ಸಂಜೆವರೆಗೆ ಕಾಯುವಂತ ಸ್ಥಿತಿ ಎದುರಾಯಿತು.
ಇಬ್ಬರು ಅತ್ಮಹತ್ಯೆಗೆ ಯತ್ನ
ಒಳ ಮೀಸಲಾತಿ ಜಾರಿ ಮಾಡದೆ 56 ಸಾವಿರ ಹುದ್ದೆ ಭರ್ತಿಗೆ ಮುಂದಾಗಿರುವ ಸರ್ಕಾರ ನಡೆ ಖಂಡಿಸಿ, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕರಾರದ ಭರತಕುಮಾರ, ಸಣ್ಣ ಬಾಬಣ್ಣ ಮತ್ತು ನರಸಪ್ಪ ದಂಡೋರಾ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗುವ ಮೂಲಕ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವಂತಾಯಿತು. ಸಕಾಲದಲ್ಲಿ ಎಚ್ಚೆತ್ತ ಪೊಲೀಸರು ಆಗುವ ಅನಾಹುತ ತಪ್ಪಿಸಿ ಕೂಡಲೇ ಚಿಕಿತ್ಸೆಗಾಗಿ ರಿಮ್ಸ್ ಅಸ್ಪತ್ರೆಗೆ ಕಳುಹಿಸಿದರು.
ಜತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರು ಎಸ್ಪಿ, ಇಬ್ಬರು ಎಎಸ್ಪಿ, 9 ಜನ ಡಿವೈಎಸ್ಪಿ, 22 ಸಿಪಿಐ, 34 ಜನ ಪಿಎಸ್‌ಐ, ಹಾಗೂ 700 ಜನ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 769 ಜನ ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಕೈಗೊಂಡಿತ್ತು. ಪ್ರಮುಖ ವೃತ್ತಗಳು, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್‌ಗೆ ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net