ದೇವದುರ್ಗ: ಕಾಡುಪ್ರಾಣಿಗಳು ಆಹಾರ ಹುಡುಕಿ ನಾಡಿನ ಕಡೆ ಬರುವುದು ಸಹಜ. ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅದರ ಸುರಕ್ಷಿತ ಸೆರೆಗಾಗಿ ಶ್ರಮಿಸುತ್ತಿದ್ದೇವೆ. ಜನರು ಚಿರತೆಗೆ ತೊಂದರೆ ಮಾಡದೆ ಅದರ ಸೆರೆಗೆ ಸಹಕಾರ ನೀಡಬೇಕು ಎಂದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಅಲಿ ಉದ್ದೀನ್ ಮನವಿ ಮಾಡಿದರು.
ನಗರಗುಂಡದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಚಿರತೆ ಸೆರೆ ಕಾರ್ಯಾಚರಣೆ, ಜಾಗೃತಿ ಹಾಗೂ ಸಮನ್ವಯ ಸಮಿತಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಚಿರತೆ ಸೂಕ್ಷ್ಮ ಪ್ರಾಣಿಯಾಗಿದ್ದು ಮನುಷ್ಯರಿಗೆ ಏನೂ ಮಾಡುವುದಿಲ್ಲ. ಆಹಾರ ಹುಡುಕಿ ಬಂದಿರಬಹುದು. ಜನರು ಅದಕ್ಕೆ ಹೊಡೆಯುವುದು, ಬೆದರಿಸುವುದು ಮಾಡಬಾರದು. ಹೊಡೆಯಲು ಹೋದರೆ ಅದು ಪ್ರಾಣಭಯಕ್ಕೆ ಮನುಷ್ಯನ ಮೇಲೆ ದಾಳಿ ಮಾಡುತ್ತದೆ. ಚಿರತೆ ಕಾಣಿಸಿಕೊಂಡರೆ ತಕ್ಷಣ ನಮಗೆ ತಿಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಮಾತನಾಡಿ, ಒಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭಯಬೀಳದೆ ಎಚ್ಚರಿಕೆ ವಹಿಸಬೇಕು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸೆರೆಗೆ ಸಹಕಾರ ನೀಡಬೇಕು. ಕಾಡುಪ್ರಾಣಿಗಳಿಗೆ ನಾವು ಭಯಪಡಿಸದಿದ್ದರೆ ಮನುಷ್ಯರಿಗೆ ಏನು ಮಾಡಲ್ಲ. ಜನರು ಆತಂಕಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಬೇಕು ಎಂದರು.
ಪಿಐ ಎಸ್.ಮಂಜುನಾಥ, ಪಶು ವೈದ್ಯಾಧಿಕಾರಿ ಬಸವರಾಜ ಮಿರಸದಾರ್, ಡಿಆರ್‌ಎಫ್‌ಒ ಮನು ಪವರ್, ಅರಣ್ಯ ಇಲಾಖೆ ಸಿಬ್ಬಂದಿ ಅಯ್ಯಣ್ಣ, ಈರೇಶ, ಹುಸೇನ್ ಸಾಬ್, ಗುರಪ್ಪ, ಭರತ್, ಗ್ರಾಮಸ್ಥರಾದ ಉಮಾಪತಿಗೌಡ, ಮರಿಲಿಂಗ, ಬೂದೆಪ್ಪ ಇತರರಿದ್ದರು.