ದೇವದುರ್ಗ: ತಾಲೂಕಿನ ಕ್ಯಾದಿಗೇರಾ ಗ್ರಾಪಂ ವ್ಯಾಪ್ತಿಯ ಬಂಡೆಮೇಲೆ ಸಿಂಗೇರಿದೊಡ್ಡಿಗೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕಿ ಕರೆಮ್ಮ ನಾಯಕಗೆ ಅಖಿಲ ಭಾರತ ರೈತ ಕಾರ್ಮಿಕರ ಸಂಘಟನೆ ಸೋಮವಾರ ಮನವಿ ಸಲ್ಲಿಸಿತು.
ಬಂಡೆಮೇಲೆ ಸಿಂಗೇರಿದೊಡ್ಡಿ ಗ್ರಾಮದಲ್ಲಿ 30 ಕುಟುಂಬಗಳು ವಾಸವಾಗಿದ್ದು, ನೀರು ರಸ್ತೆ, ವಿದ್ಯುತ್ ಬೆಳಕು, ಶಿಕ್ಷಣ ಹಾಗೂ ಮಕ್ಕಳ ಅಭಿವೃದ್ಧಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಗ್ರಾಮ ಸಂಪರ್ಕ ಕಡಿತಗೊಳ್ಳಲಿದೆ. ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ರೋಗಿಗಳನ್ನು ಚಿಕಿತ್ಸೆ ಸಿಗುವುದು ಕಷ್ಟವಾಗಿದೆ.
ಅಂಗನವಾಡಿ ಕೇಂದ್ರವಿಲ್ಲದೆ ಗರ್ಭಿಣಿಯರು, ತಾಯಂದಿರು ಹಾಗೂ ಮಕ್ಕಳಿಗೆ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಗ್ರಾಮಕ್ಕೆ ಡಾಂಬರ್ ರಸ್ತೆ ನಿರ್ಮಿಸಬೇಕು. ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು. ಅಂಗನವಾಡಿ ಕೇಂದ್ರ ಆರಂಭಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನ ನಿರ್ಮಿಸಬೇಕು. ಕುಡಿವ ನೀರಿನ ಬೋರ್‌ವೆಲ್ ನಿರ್ವಹಣೆಗೆ ನೀರಗಂಟಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸುಗೂರು, ಮುಖಂಡರಾದ ಅಮರೇಶ, ತಿಮ್ಮಯ್ಯ, ಮುಕ್ಕಣ್ಣ, ಹನುಮಯ್ಯ, ಲಂಕ್ಯಪ್ಪ, ಬಸವ, ಶಿವು ಇತರರಿದ್ದರು.