ಪ್ರತಿನಿತ್ಯ ಕುಡಿವ ನೀರು ಪೂರೈಕೆ ಮಾಡಿ

ಲಿಂಗಸುಗೂರು ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಾಸಕ ಮಾನಪ್ಪ ವಜ್ಜಲ್, ಎಸಿ ಬಸವಣೆಪ್ಪ ಕಲಶೆಟ್ಟಿ, ಮುಖ್ಯಾಧಿಕಾರಿ ನಟರಾಜ, ವ್ಯವಸ್ಥಾಪಕ ಹನುಮಂತರಾಯ ನಾಯಕ, ಪರಿಸರ ಅಧಿಕಾರಿ ಗಿರಿಜಾ ಇತರರಿದ್ದರು.
ಲಿಂಗಸುಗೂರು ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಾಸಕ ಮಾನಪ್ಪ ವಜ್ಜಲ್, ಎಸಿ ಬಸವಣೆಪ್ಪ ಕಲಶೆಟ್ಟಿ, ಮುಖ್ಯಾಧಿಕಾರಿ ನಟರಾಜ, ವ್ಯವಸ್ಥಾಪಕ ಹನುಮಂತರಾಯ ನಾಯಕ, ಪರಿಸರ ಅಧಿಕಾರಿ ಗಿರಿಜಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿನಿತ್ಯಪೂರೈಕೆ ಮಾಡಿ

ಪ್ರತಿನಿತ್ಯ ಕುಡಿವ ನೀರು ಪೂರೈಕೆ ಮಾಡಿ

ಲಿಂಗಸುಗೂರು: ಪಟ್ಟಣದ ಕಾಳಾಪುರ ಕೆರೆಯಲ್ಲಿ ಸಾಕಷ್ಟು ನೀರಿದೆ. ನಾರಾಯಣಪುರ ಬಲದಂಡೆ ಕಾಲುವೆಯಿಂದಲೂ ಹರಿಸಲಾಗುತ್ತಿದೆ. ಇಷ್ಟೆಲ್ಲ ಜಲಮೂಲ ಇದ್ದರೂ ಪುರಸಭೆ ವ್ಯಾಪ್ತಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇನ್ಮುಂದೆ ಪ್ರತಿನಿತ್ಯ ಕುಡಿವ ನೀರು ಪೂರೈಸಬೇಕು. ಇಲ್ಲದಿದ್ದರೆ ಪುರಸಭೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಎಚ್ಚರಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮೋಟಾರ್‌ಗಳ ಕೊರತೆಯಿಲ್ಲ, 128 ಬೋರ್‌ವೆಲ್‌ಗಳಿವೆ. ಕುಡಿವ ನೀರಿನ ಟ್ಯಾಂಕ್‌ಗಳಿಗೆ ಹಗಲು ರಾತ್ರಿ ನೀರು ತುಂಬಿಸಿ ನಿತ್ಯ ಪೂರೈಸಬೇಕು. ಪುರಸಭೆ ವ್ಯಾಪ್ತಿಯಲ್ಲಿ 230 ಉದ್ಯಾನಗಳಿವೆ.
ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ಪ್ಲಾಟ್‌ಗಳನ್ನಾಗಿ ಮಾರಾಟ ಮಾಡಿದ್ದೀರಿ, ಎಷ್ಟು ಒತ್ತುವರಿಯಾಗಿವೆ ಎಂದು ಪ್ರಶ್ನಿಸಿದರು. ಪಟ್ಟಣದ ರಾಜಕಾಲುವೆ ಒತ್ತುವರಿ ಮಾಡಲು ಅವಕಾಶ ಕೊಟ್ಟಿದ್ದರಿಂದ ಅಲ್ಲಿ ಮಳಿಗೆಗಳು, ಕಟ್ಟಡಗಳನ್ನು ಕಟ್ಟುತ್ತಿದ್ದಾರೆ.
ಇಷ್ಟೆಲ್ಲ ಒತ್ತುವರಿಯಾದರೂ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳ ಕೊರತೆ ಇದ್ದು, ಪ್ರತಿನಿತ್ಯ ನೀರು ಪೂರೈಸಲು ತೊಂದರೆಯಾಗುತ್ತಿದೆ. ಆದ್ದರಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು.
25 ಉದ್ಯಾನಗಳನ್ನು ಗುರುತಿಸಿ ಮಳೆಗಾಲ ಆರಂಭವಾಗುವ ಮೊದಲು ಗಿಡಗಳನ್ನು ಬೆಳೆಸಲು ಅರಣ್ಯಾಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಕರಡಕಲ್ಲ ಪರಿಶಿಷ್ಟ ಜಾತಿ, ಪಂಗಡಗಳ ಕಾಲನಿಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು, ಕಾಂಪೌಂಡ್ ಕಟ್ಟಬೇಕು. ದೇವಸ್ಥಾನಗಳ ಸುತ್ತ ಸ್ವಚ್ಛತೆ ಕಾಪಾಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಕೊರತೆ ಬಗ್ಗೆ ದೂರುಗಳಿವೆ. ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸ್ಥಳಗಳಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಶಾಸಕ ವಜ್ಜಲ್ ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ನಟರಾಜ, ವ್ಯವಸ್ಥಾಪಕ ಹನುಮಂತರಾಯ ನಾಯಕ, ಪರಿಸರ ಅಧಿಕಾರಿ ಗಿರಿಜಾ, ಆರೋಗ್ಯ ನಿರೀಕ್ಷಕ ಶಾನವಾಜ, ಸಿಬ್ಬಂದಿ ಶಿವಲಿಂಗ, ಮಾನಪ್ಪ, ಮಂಜುನಾಥ, ಗದ್ದೆಪ್ಪ, ಭಾಗ್ಯಜ್ಯೋತಿ, ಸುವರ್ಣಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net