ಪ್ರಯಾಣಿಕರಿಗೆ ಸೌಕರ್ಯ-ಭದ್ರತೆ ಕಲ್ಪಿಸಿ

ಸಿಂಧನೂರಿನಲ್ಲಿ ಡಿಪೋ ವ್ಯವಸ್ಥಾಪಕ ಹೊನ್ನಪ್ಪಗೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ಶುಕ್ರವಾರ ಮನವಿ ಸಲ್ಲಿಸಿತು.
ಸಿಂಧನೂರಿನಲ್ಲಿ ಡಿಪೋ ವ್ಯವಸ್ಥಾಪಕ ಹೊನ್ನಪ್ಪಗೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ಶುಕ್ರವಾರ ಮನವಿ ಸಲ್ಲಿಸಿತು.
Published on
ಪ್ರಯಾಣಿಕರಿಗೆ ಸೌಕರ್ಯ-ಭದ್ರತೆ ಕಲ್ಪಿಸಿ Provide comfort and security to passengers
ಸಿಂಧನೂರು: ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೌಕರ್ಯ, ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ವೇದಿಕೆ ಶುಕ್ರವಾರ ಘಟಕ ವ್ಯವಸ್ಥಾಪಕ ಹೊನ್ನಪ್ಪಗೆ ಮನವಿ ಸಲ್ಲಿಸಿತು. 
ಜಿಲ್ಲೆಯಲ್ಲೇ ಸಿಂಧನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಆದರೆ, ಬಸ್ ನಿಲ್ದಾಣದಲ್ಲಿ  ಪ್ರಯಾಣಿಕರಿಗೆ ಸುರಕ್ಷತೆ-ಭದ್ರತೆ ಇಲ್ಲದಂತಾಗಿದೆ. ಜನದಟ್ಟಣೆ ಇರುವ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ನಿರ್ವಹಣೆ ಸಮಸ್ಯೆ ಹೆಚ್ಚಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಕಲಬುರಗಿ ಮಾರ್ಗದ ಪ್ರಮುಖ ಬಸ್ ನಿಲ್ದಾಣವಾಗಿರುವುದರಿಂದ ದಿನವೂ ಸಾವಿರಾರು ಪ್ರಯಾಣಿಕರು ಇಲ್ಲಿಂದಲೇ ಹಲವು ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. 
ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಮಾ.16ರಂದು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸಾರಿಗೆ ಸಂಸ್ಥೆ ಬಸ್ ಹರಿದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೇವಿನಾಳ ಗ್ರಾಮದ ದೊಡ್ಡ ಈರಮ್ಮ ಬಸಣ್ಣ (38) ಸಾವಿಗೀಡಾದರು.  ನಿಲ್ದಾಣಕ್ಕೆ ಕಾಂಪೌಂಡ್ ಇಲ್ಲದಿರುವುದರಿಂದ ಅನಧಿಕೃತ ವಾಹನಗಳು ಒಳಗಡೆ ಪ್ರವೇಶಿಸುತ್ತಿವೆ. ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಎರಡೂ ಪ್ರವೇಶ ದ್ವಾರಗಳಲ್ಲಿ ಕಾವಲುಗಾರರನ್ನು ನೇಮಿಸಬೇಕು. ಕಬ್ಬಿಣದ ಸರಳಿನ ಪಾದಚಾರಿ ಮಾರ್ಗ ನಿರ್ಮಿಸಿ ಸುಲಭವಾಗಿ ಸಂಚರಿಸಲು ಕೂಡಲೇ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ವೇದಿಕೆಯ ರಾಜ್ಯ ಸಂಚಾಲಕ ಇ.ಎಚ್.ನಾಯಕ್, ತಾಲೂಕು ಸಂಚಾಲಕ ದುರುಗೇಶ ಸಾನಬಾಳ, ವಿದ್ಯಾರ್ಥಿಗಳಾದ ಪ್ರದೀಪ್, ಭೀಮೇಶ್, ಸ್ವಾಮಿ ನಾಯಕ್, ದುರುಗಪ್ಪ, ವಿನೋದ್ ಕುಮಾರ್, ಶರಣಬಸವ, ಶಾಂಭವಿ, ಶಾರದಾ ನಾಯಕ್, ಐಶ್ವರ್ಯ, ಶರಣ್, ಅಡಿವೇಶ, ಸುದೀಪ್, ರಂಜಾನ್ ಸಾಬ್, ದರ್ಶನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net