

ರಾಯಚೂರು
ಕೇಂದ್ರದ ಬಿಜೆಪಿ ಸರ್ಕಾರ ನೀತಿಗಳನ್ನು ವಿರೋಧಿಸಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ನೀಡಿದ್ದ ಕರೆಗೆ ಮೇರೆಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜೈಲ್ ಭರೋ ಪ್ರತಿಭಟನೆ ನಿಮಿತ್ತ ಸೋಮವಾರ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ವಿವಿಧ ರಸ್ತೆಗಳ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಜೈಲ್ ಭರೋ ನಡೆಸಿದರು. ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ದೇಶಿ-ವಿದೇಶಿ ಕಂಪನಿಗಳ ಸುಪರ್ದಿಗೆ ಒಪ್ಪಿಸುತ್ತಿದ್ದು, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಸಾಲದ ಹೊರೆ ಹಾಗೂ ಖಾಸಗೀಕರಣದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ವೈಜ್ಞಾನಿಕ ಲೆಕ್ಕಾಚಾರದಲ್ಲಿ ಕನಿಷ್ಠ ವೇತನ ಪರಿಷ್ಕರಿಸಿ ಮೇ 22ರಂದು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ ಎರಡು ತಿಂಗಳು ಕಳೆದರೂ ಪರಿಷ್ಕೃತ ವೇತನವನ್ನು ಜಾರಿಗೊಳಿಸಿಲ್ಲ. ಇದರಿಂದ ರಾಜ್ಯದ ಸುಮಾರು ಒಂದು ಕೋಟಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ಮಾಲೀಕರ ಲಾಬಿಗೆ ಮಣಿಯದೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು, ಬಲವಂತದ ಭೂಸ್ವಾಧೀನ ಮತ್ತು ಕಾರ್ಪೊರೇಟ್ ಭೂ ಕಬಳಿಕೆ ತಡೆಯಬೇಕು. ಕಾರ್ಮಿಕ ಸಂಹಿತೆಗಳ ಜಾರಿ ಹಿಂಪಡೆಯಬೇಕು. ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ, ಖಾಯಂಮೇತರ, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಮತ್ತು ಪಿಂಚಣಿ ನೀಡಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ರೈತರು, ಕೃಷಿ ಕೂಲಿಕಾರರು ಹಾಗೂ ಮಹಿಳೆಯರ ಸಾಲ ಮನ್ನಾ ಮಾಡಬೇಕು.
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಮತ್ತು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಶಾಶ್ವತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆಜಿ.ವೀರೇಶ,ಎನ್.ಎಸ್.ವೀರೇಶ, ಡಿಎಸ್ ಶರಣಬಸವ,ಮಲ್ಲನಗೌಡ, ಮಹೇಶ ಚೀಕಲಪರ್ವಿ, ಚಾಮರಸ ಮಾಲಿ ಪಾಟೀಲ್, ಬಸಲಿಂಗಪ್ಪ ನಗನೂರು, ಕರಿಯಪ್ಪ ಅಚ್ಚೋಳಿ, ಪ್ರಭಾಕರ್ ಪಾಟೀಲ್, ಭಾಷುಮಿಯಾ, ಜೀಂದಪ್ಪ ವಡ್ಲೂರ್, ಶ್ರೀನಿವಾಸ ಕಲವಲದೂಡ್ಡಿ, ಹೆಚ್.ಪದ್ಮಾ, ಅಶೋಕ ನೀಲಗಲ್ ಸಾಜೀದ್ ಹುಸೇನ್, ಬಸಂತರಾಯ ಗೌಡ, ಮಾರೇಪ್ಪ ಹರವಿ ಸೇರಿ ಅನೇಕರು ಇದ್ದರು.