ಸಿಂಧನೂರು: ಹದ್ದಿನಾಳ ಗ್ರಾಮದ ದಲಿತ ಯುವ ಮುಖಂಡ ಭೂಮಾನಂದನ ಕೊಲೆ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಕುರಿತು ತ್ವರಿತ ಹಾಗೂ ನಿಸ್ಪಕ್ಷ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ವಹಿಸಬೇಕು. ಮೃತನ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡುವುದರೊಂದಿಗೆ ಸರ್ಕಾರದಿಂದ ಐದು ಎಕರೆ ಜಮೀನು, ಸರ್ಕಾರಿ ನೌಕರಿ ಹಾಗೂ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.
ದಲಿತರ ಮೇಲಿನ ಜಾತಿ ದೌರ್ಜನ್ಯ ಹಾಗೂ ಕೊಲೆಗಳನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಪ್ರಕರಣದಲ್ಲಿ ಕೂಡಲೇ ನ್ಯಾಯಯುತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.