ದೇವದುರ್ಗ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು. ಜಿಲ್ಲಾ ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ತಾಪಂ ಇಒ ಬಸವರಾಜ ಹಟ್ಟಿ, ಅರಕೇರಾ ತಾಪಂ ಇಒ ಅಣ್ಣರಾವ್ ನಾಯಕ ಇತರರಿದ್ದರು.
ದೇವದುರ್ಗ: ಬೇಸಿಗೆ ಆರಂಭವಾಗಿದ್ದು, ಕುಡಿವ ನೀರಿನ ಬೇಡಿಕೆ ಹೆಚ್ಚಾಗಲಿದೆ. ಆದ್ದರಿಂದ ನಗರ ಸೇರಿ ಗ್ರಾಮೀಣ ಭಾಗದ ನೀರಿನ ಮೂಲಗಳ ರಕ್ಷಣೆಗೆ ಮುಂದಾಗಬೇಕು. ನೀರಿನ ಸಮಸ್ಯೆ ಕಂಡುಬಂದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಯಾವುದೇ ಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕು. ಎಲ್ಲ ಗ್ರಾಮಗಳಲ್ಲಿ ಕಡ್ಡಾಯವಾಗಿ ಗ್ರಾಮಸಭೆ ನಡೆಸಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.
ಬೋರ್‌ವೆಲ್ ಕೊರೆದ ನಂತರ ನೀರು ಬೀಳದಿದ್ದರೆ ಕೂಡಲೇ ಮುಚ್ಚಬೇಕು. ದನಕರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಎಲ್ಲ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ಸ್ಪಂದಿಸಬೇಕು.
ನೀರಿನ ಮೂಲಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. 15 ದಿನಗಳಿಗೊಮ್ಮೆ ಸ್ಥಳಕ್ಕೆ ಭೇಟಿನೀಡಿ ಕೆರೆ, ಬಾವಿ, ಬೋರ್‌ವೆಲ್, ನದಿದಂಡೆ ಜಾಕ್‌ವೆಲ್ ಮೇಲೆ ನಿಗಾವಹಿಸಬೇಕು.
ಶುದ್ಧ ಕುಡಿವ ನೀರಿನ ಘಟಕಗಳನ್ನು ಗ್ರಾಪಂಗಳೇ ನಿರ್ವಹಿಸಬೇಕು. ಸಮಸ್ಯೆ ಕಂಡುಬಂದರೆ ತಕ್ಷಣ ರಿಪೇರಿ ಮಾಡಬೇಕು. ಅಗತ್ಯ ಇರುವಕಡೆ ಬೋರ್‌ವೆಲ್ ಕೊರೆಸಬೇಕು. ಗ್ರಾಪಂ ಅಧಿಕಾರಿಗಳಿಗೆ ಜೆಸ್ಕಾಂ, ಜಿಪಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಹಕರಿಸಬೇಕು.
ಕುಡಿವ ನೀರಿನ ಯೋಜನೆಗಳನ್ನು ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಜಾತ್ರೆ ನಂತರ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು. ಅರಕೇರಾ, ಚಿಂತಲಕುಂಟಾದಲ್ಲಿ ರುದ್ರಭೂಮಿಗೆ ಭೂಮಿ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ತಾಪಂ ಇಒ ಬಸವರಾಜ ಹಟ್ಟಿ, ಅರಕೇರಾ ತಾಪಂ ಇಒ ಅಣ್ಣರಾವ್ ನಾಯಕ ಇತರರಿದ್ದರು.