ಇಪ್ಪತ್ತು ಹೊಸ ಬಸ್‌ಗಳ ಒದಗಿಸಲು ಪ್ರಸ್ತಾವನೆ

ದೇವದುರ್ಗದ ಬಸ್ ಡಿಪೋದಲ್ಲಿ ದೇವದುರ್ಗ-ಪುಣೆ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ ನೀಡಿದರು. ಡಿಪೋ ಮ್ಯಾನೇಜರ್ ರಾಮನಗೌಡ, ಪ್ರಮುಖರಾದ ಶರಣಪ್ಪ ಬಳೆ, ದೊಡ್ಡರಂಗಣ್ಣ ಪಾಟೀಲ್ ಅಳ್ಳುಂಡಿ, ಶೀಖರೇಶ ಪಾಟೀಲ್ ಇತರರಿದ್ದರು.
ದೇವದುರ್ಗದ ಬಸ್ ಡಿಪೋದಲ್ಲಿ ದೇವದುರ್ಗ-ಪುಣೆ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ ನೀಡಿದರು. ಡಿಪೋ ಮ್ಯಾನೇಜರ್ ರಾಮನಗೌಡ, ಪ್ರಮುಖರಾದ ಶರಣಪ್ಪ ಬಳೆ, ದೊಡ್ಡರಂಗಣ್ಣ ಪಾಟೀಲ್ ಅಳ್ಳುಂಡಿ, ಶೀಖರೇಶ ಪಾಟೀಲ್ ಇತರರಿದ್ದರು.
Published on
ದೇವದುರ್ಗ: ತಾಲೂಕಿನ ಪ್ರತಿ ಹಳ್ಳಿಗೂ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದೇವದುರ್ಗ ಘಟಕಕ್ಕೆ 20 ಹೊಸ ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಪಟ್ಟಣದ ಬಸ್ ಡಿಪೋದಲ್ಲಿ ಭಾನುವಾರ ದೇವದುರ್ಗ-ಪುಣೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. 20 ಹೊಸ ಬಸ್ ಹಾಗೂ 2 ಸ್ಲೀಪರ್‌ಬಸ್ ನೀಡಲು ಮನವಿ ಮಾಡಿದ್ದೇನೆ. ಭಕ್ತರ ಒತ್ತಾಯದ ಮೇರೆಗೆ ಧರ್ಮಸ್ಥಳ, ಧಾರವಾಡ ಸೇರಿ ವಿವಿಧೆಡೆ ಬಸ್ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ದೇವದುರ್ಗ-ತಿರುಪತಿಗೆ ಬಸ್ ಸಂಚಾರ ಆರಂಭಿಸಲಾಗುವುದು. ಪುಣೆ-ಗೋವಾಗೆ ಬಂಜಾರ ಸಮುದಾಯದವರು ಹೆಚ್ಚಾಗಿ ಹೋಗುತ್ತಿದ್ದು, ಬಸ್ ಇಲ್ಲದೆ ಸಮಸ್ಯೆಯಾಗಿತ್ತು. ಆದ್ದರಿಂದ ದೇವದುರ್ಗ-ಪುಣೆ ಬಸ್ ಸಂಚಾರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿ ಹಾಗೂ ತಾಂಡಾಕ್ಕೂ ಬಸ್ ಬಿಡಲಾಗುವುದು. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಸಾರಿಗೆ ನೌಕರರಿಗೆ ಸಹಕಾರ ನೀಡಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಡಿಪೋ ಮ್ಯಾನೇಜರ್ ರಾಮನಗೌಡ ಮಾತನಾಡಿ, ಶಕ್ತಿ ಯೋಜನೆಯಿಂದ ಪುಣೆಗೆ ಹೋಗುತ್ತಿದ್ದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಪ್ರತಿ ಕಿಮೀ ಬಸ್ ಓಡಿಸಲು 40ರೂ. ಖರ್ಚು ಬರಲಿದೆ. ಆದರೆ ಈ ಮಾರ್ಗದಲ್ಲಿ 29-30 ರೂ. ಸಂಗ್ರಹವಾಗಿ 10ರೂ. ಹೆಚ್ಚುವರಿ ಖರ್ಚಾಗುತ್ತಿತ್ತು. ಧರ್ಮಸ್ಥಳ ಮಾರ್ಗದಿಂದ 50ರೂ. ಆದಾಯ ಬರುತ್ತಿದೆ. ಕೆಲವು ಕಡೆ ಲಾಭವಿಲ್ಲದಿದ್ದರೂ ಬಸ್ ಬಿಡಲಾಗಿದೆ. ಸುರಕ್ಷಿತ ಪ್ರಯಾಣಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಬೇಕು ಎಂದು ತಿಳಿಸಿದರು. ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಶರಣಪ್ಪ ಬಳೆ, ಪ್ರಮುಖರಾದ ದೊಡ್ಡರಂಗಣ್ಣ ಪಾಟೀಲ್ ಅಳ್ಳುಂಡಿ, ಶೀಖರೇಶ ಪಾಟೀಲ್, ಕೃಷ್ಣಪ್ಪ ನಾಯಕ, ಅಯ್ಯಣ್ಣ, ನಾಗರಾಜ ಪಾಟೀಲ್, ಮಹಾದೇವಪ್ಪಗೌಡ ಹಿರೇಬೂದೂರು, ಗೌರಿ ಜಿ.ನಾಯಕ ಇತರರಿದ್ದರು.
ದೇವದುರ್ಗ-ಪುಣೆ ಬಸ್ ಸಂಚಾರ ಬಂದ್ ಮಾಡಿರುವ ಕುರಿತು ಹಾಗೂ ಗುಳೆ ಹೋಗುವವರು ಎದುರಿಸುವ ಸವಾಲುಗಳ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net