ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ರಾಯಚೂರಿನ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಗುರುವಾರ ಗ್ಯಾರೆಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಲೂಕು ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ಪ್ರಾಧಿಕಾರದ ಉಪಾಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಗಫೂರಸಾಬ್, ಹನುಮಂತಪ್ಪ ಜಾಲಿಬೆಂಚಿ, ಶಂಕರಗೌಡ, ಸದಸ್ಯರಾದ ಬಿ.ಕೆ.ಅಂಬರೀಷ್, ಲಕ್ಷ್ಮಣ ಜ್ಯೋತಿ, ಮಹೆಬೂಬ್, ಅನಿಲ್ ಕುಮಾರ, ವೆಂಕಟೇಶ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಇದ್ದರು.
ಸರ್ಕಾರಿ ಸೌಲಭ್ಯದ ಹಣವನ್ನು ಫಲಾನುಭವಿಯ ಸಾಲಕ್ಕೆ ಕಡಿತಗೊಳಿಸಿದರೆ, ಆಯಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕ್ರಮ ವಹಿಸುವಂತೆ ಗ್ಯಾರೆಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಯಾವುದೇ ಫಲಾನುಭವಿಯ ಗೃಹಲಕ್ಷ್ಮೀ ಹಣಸಾಲಕ್ಕೆ ಕಡಿತಗೊಳಿಸಿದರೇ ಸಹಾಯವಾಣಿಗೆ ಸಂಪರ್ಕಿಸಲು ಪ್ರತಿ ಬ್ಯಾಂಕ್‌ಗಳಲ್ಲಿ ಲೀಡ್ ಬ್ಯಾಂಕ್ ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು. ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ರೀತಿಯ ಘಟನೆಗಳು ಕಂಡುಬಂದರೆ. ತಕ್ಷಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಜತೆಗೆ ಎಲ್ಲಾ ಬ್ಯಾಂಕಿಗೂ ಲೀಡ್ ಬ್ಯಾಂಕಿನಿಂದ ನಿರ್ದೇಶನ ನೀಡಬೇಕೆಂದು ಸೂಚಿಸಿದರು.
ಗೃಹಲಕ್ಷ್ಮೀ ಫಲಾನುಭವಿಗಳು ಮೃತ ಹೊಂದಿದ್ದರೆ, ಅಂತವರ ಮಾಹಿತಿಯನ್ನು ಸಭೆಗೆ ತಿಳಿಸಬೇಕು. ಮತ್ತು ಮೃತ ಫಲಾನುಭವಿ ಮೃತ ಹೊಂದಿದ ನಂತರವೂ ಹಣ ಜಮೆಯಾಗಿದ್ದರೆ ಅವನ್ನು ಹಿಂಪಡೆಯುವ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಈಗಾಗಲೇ ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ ಮಾಹಿತಿ ನೀಡಿಲ್ಲ. 15 ದಿನಗಳ ಒಳಗಾಗಿ ಮೃತ ಫಲಾನುಭವಿಗಳ ಮಾಹಿತಿ ಮತ್ತು ಎಷ್ಟು ಹಣ ವಾಪಸ್ ಪಡೆಯಲಾಗಿದೆ ಎಂಬುವುದರ ಕುರಿತು ವರದಿ ಒಪ್ಪಿಸಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ. ಆದರೆ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಯ ಬ್ಯಾಂಕಿಗೆ ಜಮಾ ಆದ ತಕ್ಷಣ ಅವರ ಸಾಲಕ್ಕೆ ಆ ಹಣವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ದೂರುಗಳು ಜಿಲ್ಲಾಧ್ಯಂತ ಕೇಳಿಬರುತ್ತಿದ್ದು, ಸಾಲಕ್ಕೆ ಸರ್ಕಾರಿ ಸೌಲಭ್ಯದ ಹಣ ಕಡಿತಗೊಳಿಸದರೇ ಸರ್ಕಾರ ಫಲಾನುಭವಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದಂತಾಗುತ್ತದೆ. ಕೂಡಲೇ ಇಂತಹ ಘಟನೆಗಳು ಜರುಗಿದರೆ. ಇದೊಂದು ಅಪರಾಧವೆಂದು ಪರಿಗಣಿಸಿ, ಆಯಾ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಗಫೂರಸಾಬ್, ಹನುಮಂತಪ್ಪ ಜಾಲಿಬೆಂಚಿ, ಶಂಕರಗೌಡ, ಸದಸ್ಯರಾದ ಬಿ.ಕೆ.ಅಂಬರೀಷ್, ಲಕ್ಷ್ಮಣ ಜ್ಯೋತಿ, ಮಹೆಬೂಬ್, ಅನಿಲ್ ಕುಮಾರ, ವೆಂಕಟೇಶ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿ.ಯು.ಹುಡೇದ್ ಸೇರಿ ಅನೇಕರು ಇದ್ದರು.