ಯುದ್ಧದಿಂದ ಕೇಡು ಇದ್ದು ಸಮಾಜದಲ್ಲಿ ಅಶಾಂತಿ ನೆಲೆಸಲಿದೆ. ಜನರು ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಜೈನ್ ಮುನಿ ಆಚಾರ್ಯ ಶ್ರೀ ವಿಮಲ್ ಸಾಗರ ಸುರೇಶ್ವರಜೀ ಹೇಳಿದರು.
ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಶನಿವಾರ ಜೈನ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಅಹಿಂಸೆ, ಸತ್ಯ ತತ್ವಗಳನ್ನು ಪಾಲಿಸಬೇಕು. ಅತಿಯಾಸೆಗೆ ಬಲಿಯಾಗಬಾರಂದು ಎಂದು ಜೈನ್ ಧರ್ಮ ಹೇಳಿದೆ. ಕೇವಲ ದೈಹಿಕ ಹಿಂಸೆಯಷ್ಟೇ ಅಲ್ಲದೆ, ನಮ್ಮ ಮಾತು ಮತ್ತು ಆಲೋಚನೆಗಳಿಂದಲೂ ಯಾರಿಗೂ ನೋವುಂಟು ಮಾಡಬಾರದು.
ಇತರರ ತಪ್ಪುಗಳನ್ನು ಕ್ಷಮಿಸುವುದರಿಂದ ಮನಸ್ಸಿನಲ್ಲಿ ದ್ವೇಷದ ಭಾವನೆ ಮಾಯವಾಗಿ ಶಾಂತಿ ನೆಲೆಸುತ್ತದೆ. ಸದಾ ಸತ್ಯವನ್ನು ಮಾತನಾಡುವುದು ಮತ್ತು ಪ್ರಾಮಾಣಿಕ ಜೀವನವನ್ನು ನಡೆಸುವುದು ಸಮಾಜದ ಸ್ವಾಸ್ಥ್ಯಕ್ಕೆ ಮೂಲಾಧಾರವಾಗಲಿದೆ. ನಿಜವಾದ ಶಾಂತಿ ಹೊರಗಿನ ಪ್ರಪಂಚದಲ್ಲಿ ಇಲ್ಲ. ಅದು ನಮ್ಮ ಒಳಗಿನ ಶುದ್ಧ ಮನಸ್ಸು ಮತ್ತು ಸದ್ವಿಚಾರಗಳಲ್ಲಿ ಅಡಗಿದೆ ಎಂದರು.
ತಮ್ಮದು ಕರ್ನಾಟಕದ ಚಳ್ಳಿಕೇರಿ ಮೂಲ. 14ನೇ ವರ್ಷಕ್ಕೆ ಧೀಕ್ಷೆ ತೆಗೆದುಕೊಂಡು ದೇಶದ ಎಲ್ಲ ರಾಜ್ಯಗಳಲ್ಲಿ ಸಂಚಾರ ಮಾಡಿರುವೆ. 1ಲಕ್ಷ ಕಿಮೀ ಪಾದಯಾತ್ರೆ ನಡೆಸಿ, ಶಾಂತಿ, ಅಹಿಂಸೆ ಬೋಧನೆ ಮಾಡಿರುವೆ. ಅಲ್ಲಲ್ಲಿ ಪ್ರವಚನ, ಉಪನ್ಯಾಸ ನೀಡಿರುವೆ. 44ವರ್ಷದ ನಂತರ ಕರ್ನಾಟಕಕ್ಕೆ ಬಂದಿರುವೆ. ಕಳೆದ ನಾಲ್ಕು ವರ್ಷದಿಂದ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಪಾದಯಾತ್ರೆ ಕೈಗೊಂಡಿರುವೆ. ಸಂಸ್ಕೃತಿ, ಸಂಸ್ಕಾರ, ನೈತಿಕ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಮಹತ್ ಕಾರ್ಯ ಮಾಡಿರುವೆ ಎಂದರು.
ಜೈನ್ ಸಮುದಾಯ ರಾಜಕೀಯವಾಗಿ ಬೆಳೆಯಬೇಕು. ಆದರೆ, ಅಲ್ಲಿ ಸೇವಾ ಮನೋಭಾವ ಇಲ್ಲ. ಇದರಿಂದ ಆ ವ್ಯವಸ್ಥೆಗೆ ಹೋಗುವುದಕ್ಕೆ ಹಿಂಜರಿಕೆ ಇದೆ. ಡಾಕ್ಟರ್, ಇಂಜಿನಿಯರ್ ಹಾಗೂ ಸಿಎ ಆಗುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಹಣ ಗಳಿಸಬಹುದು. ಸೇವಾ ಮನೋಭಾವಕ್ಕೆ ಆದ್ಯತೆ ನೀಡಲು ಸಾಧ್ಯವಾಗುವುದಿಲ್ಲ. ಎಲ್ಲದು ಹಣದಿಂದ ನಡೆಯುತ್ತದೆಂಬ ಕಲ್ಪನೆ ತಪ್ಪು ಎಂದರು.
ಶ್ರೀ ಕುಂತುನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಲಾಲಚಂದ್ ಜೈನ್, ಶ್ರೇಣಿಕರಾಜ ಛಾಜೇಡ್, ಸಂಜಯ ನಹರಾ, ವಿನೋದ ಲೋಡಾ, ಸಂಜು ಬಂಬು, ಮಹಾವೀರ ಜಿರಾವಾಲಾ, ಗೌತಮ ಮೆಹ್ತಾ, ಗೌತಮ ಛಾಜೇಡ್ ಇತರರು ಇದ್ದರು.