ಮಸ್ಕಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಫಲಿತಾಂಶ ಬಲವರ್ಧನೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ತಾಪಂ ಇಒ ಅಮರೇಶ ಯಾದವ್ ಮಾತನಾಡಿದರು.
ಮಸ್ಕಿ: ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಶಿಸ್ತುಬದ್ಧ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ತಾಪಂ ಇಒ ಅಮರೇಶ ಯಾದವ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಪಿಯು ಫಲಿತಾಂಶ ಬಲವರ್ಧನೆ ಹಾಗೂ ವೃತ್ತಿ
ಮಾರ್ಗದರ್ಶನ ಕುರಿತು ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಮುಂದೆ ಅನೇಕ ವೃತ್ತಿಗಳ ಆಯ್ಕೆಗಳಿದ್ದು, ಉಜ್ವಲ ಭವಿಷ್ಯಕ್ಕೆ ಪಿಯುಸಿ ಫಲಿತಾಂಶ ಮಾನದಂಡವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಮುಂದೆ ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸ್‌ಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಲು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಮಸ್ಕಿ ತಾಲೂಕು ಒಳಪಟ್ಟಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಒಗ್ಗೂಡಿ ಪರೀಕ್ಷೆ ಎದುರಿಸುವ ಕುರಿತು ನೀಲಿನಕ್ಷೆ ರೂಪಿಸಿದಾಗ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಂಜುಳಾ ಅವರು, ಪರೀಕ್ಷೆ ಎದುರಿಸಲು ಬೇಕಾದ ಮಾನಸಿಕ ದೃಢತೆ ಕಾಯ್ದುಕೊಳ್ಳುವ ಕ್ರಮಗಳ ಕುರಿತು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಆರ್.ಕೆ.ರಂಗಪ್ಪ ಇದ್ದರು.