ಸಿಂಧನೂರು: ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶುಕ್ರವಾರ ಮಳೆಗಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ನಮಾಜ್ ಮಾಡಿದರು.
ಬಡಿಬೇಸ್ ಮಸ್ಜಿದ್‌ನಿಂದ ಮೆರವಣಿಗೆ ಮೂಲಕ ತೆರಳಿ ಈದ್ಗಾ ತಲುಪಿ, ಮಳೆಯ ಕೊರತೆಯಿಂದ ರೈತರು ಸೇರಿದಂತೆ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಮಳೆಯಾಗಿ ಉತ್ತಮಫಸಲು ಬರಲಿ ಎಂದು ಪ್ರಾರ್ಥಿಸಿದರು.
ಈದ್ಗಾ ಕಮಿಟಿ ಅಧ್ಯಕ್ಷ ಸೈಯದ್ ಹಾರೂನ್ ಜಾಹಗೀರ್ ದಾರ್ ಮಾತನಾಡಿ, ಮಳೆಗಾಲ ಆರಂಭವಾಗಿ 2-3ತಿಂಗಳು ಮುಗಿಯುತ್ತಿದ್ದರೂ ತಾಲೂಕಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಕೆರೆ, ಹಳ್ಳ, ಕೊಳ್ಳಗಳು ಬತ್ತಿವೆ. ಜಾನುವಾರುಗಳಿಗೆ ನೀರು, ಮೇವು ದೊರಕುತ್ತಿಲ್ಲ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆ ಕರುಣಿಸುವಂತೆ ದೇವರನ್ನು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.