ಲಿಂಗಸುಗೂರು: ಅಬಕಾರಿ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಆರ್.ಬಿ.ತಿಮ್ಮಾಪುರ ಅವರ ರಾಜಕೀಯ ವರ್ಚಸ್ಸು ಕುಗ್ಗಿಸಲು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ತಿಮ್ಮಾಪುರ ವಿರುದ್ಧ ನಡೆಯುತ್ತಿರುವ ರಾಜಕೀಯ ಪಿತೂರಿಗಳನ್ನು ಸಮಿತಿ ಖಂಡಿಸುತ್ತದೆ. ಆರ್.ಬಿ ತಿಮ್ಮಾಪುರ ಅವರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಗಳಿಗಾಗಿ ಶ್ರಮಿಸುತ್ತಿದ್ದಾರೆ.
ಯಾವುದೇ ಆಸೆ, ಆಮಿಷಗಳಿಗೆ ಬಲಿಯಾದವರಲ್ಲ. ಅವರನ್ನು ಸಿಲುಕಿಸುವ ಕುತಂತ್ರ ಮಾಡಲಾಗುತ್ತಿದೆ.
ಸಚಿವರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಹಿಂದೆ ಅಧಿಕಾರಿಯ ಪಾತ್ರವಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುವುದನ್ನು ಬಿಟ್ಟು ಸಚಿವರ ವಿರುದ್ಧ ಪಿತೂರಿ ನಡೆಸುವುದು ತರವಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.