ಸಿಂಧನೂರಿನಲ್ಲಿ ಡ್ರಗ್ಸ್, ಗಾಂಜಾ ಮಾರಾಟ, ಪೊಲೀಸ್ ಕಾರ್ಯಾಚರಣೆ ಚುರಕು

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on
ಸಿಂಧನೂರು: ತಾಲೂಕಿನಲ್ಲಿ ಹಲವು ತಿಂಗಳಿಂದ ಡ್ರಗ್ಸ್, ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿದೆ. ಅಕ್ರಮದ ವಿರುದ್ಧ ಎಂಎಲ್ಸಿ ಬಸನಗೌಡ ಬಾದರ್ಲಿ ಫೌಂಡೇಷನ್ ನೇತೃತ್ವದಲ್ಲಿ ಅಭಿಯಾನ ನಡೆಸುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತಿದ್ದು, ಚುರುಕಿನ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿದೆ. 
ಸಿಂಧನೂರು ನಗರ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಶಿಕ್ಷಣ ಸಂಸ್ಥೆಗಳು ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಮಾದಕ ವಸ್ತು ಮಾರಾಟ ಮಾಡುವ ಪೆಡ್ಲರ್‌ಗಳು ಮುಗ್ದ ವಿದ್ಯಾರ್ಥಿಗಳ ತಲೆಕೆಡಿಸಿ ದುಶ್ಚಟಕ್ಕೀಡು ಮಾಡುತ್ತಿದ್ದಾರೆಂಬ ಆರೋಪವಿದೆ.
ಕಳೆದ 2026ರ ಜನವರಿ-ಫೆಬ್ರವರಿ ಅವಧಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ 15 ಪ್ರಕರಣಗಳು ಪತ್ತೆಯಾಗಿದ್ದವು. ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಆತಂಕವೂ ಇದೆ. ಈ ನಡುವೆ ಅಕ್ರಮ ಜಾಲದ ಹಿಂದೆ ಕೆಲ ಕಾಣದ ಕೈಗಳಿರುವ ದೂರುಗಳಿವೆ. ಅಲ್ಲದೆ ಗ್ರಾಮೀಣ ಠಾಣೆ ನಿರ್ವಹಿಸಬೇಕಾದ ಪ್ರಕರಣಗಳನ್ನು ಬಳಗಾನೂರು ಠಾಣೆ ಪೊಲೀಸರು ಭೇದಿಸುತ್ತಿರುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅದೇನೆ ಇರಲಿ ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳು, ಯುವಜನರ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಂಡು ಗಾಂಜಾ-ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. 
"

ಸಿಂಧನೂರು ತಾಲೂಕಿನಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಇತರ ಅಕ್ರಮಗಳಿಗೆ ಬ್ರೇಕ್ ಹಾಕಿದ್ದೇವೆ. ಇಲಾಖೆಯಿಂದಲೂ ಅಕ್ರಮಗಳ ವಿರುದ್ಧ ಅಭಿಯಾನವು ನಡೆಸಲಾಗುತ್ತಿದೆ. ಗಾಂಜಾ, ಡ್ರಗ್ಸ್ ಮಾರಾಟ ಮಾಡುವುದು ಕಂಡುಬಂದರೆ ಮಾಹಿತಿ ನೀಡಿದಲ್ಲಿ ಖಂಡಿತವಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.

— ಚಂದ್ರಶೇಖರ ನಾಯಕ ಡಿವೈಎಸ್ಪಿ, ಸಿಂಧನೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net