ಶಾಶ್ವತ ಕುಡಿವ ನೀರಿನ ಯೋಜನೆ ವಿಸ್ತರಿಸಿ

ಹಟ್ಟಿ ಚಿನ್ನದ ಗಣಿ ಕಂಪನಿ ಇಡಿ ಪ್ರಕಾಶ ಕೆ. ಅವರಿಗೆ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಶನಿವಾರ ಮನವಿ ಸಲ್ಲಿಸಿತು.
ಹಟ್ಟಿ ಚಿನ್ನದ ಗಣಿ ಕಂಪನಿ ಇಡಿ ಪ್ರಕಾಶ ಕೆ. ಅವರಿಗೆ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಶನಿವಾರ ಮನವಿ ಸಲ್ಲಿಸಿತು.
Published on
ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣಕ್ಕೂ ಶಾಶ್ವತ ಕುಡಿವ ನೀರಿನ ಯೋಜನೆ ವಿಸ್ತರಿಸಬೇಕೆಂದು ಆಗ್ರಹಿಸಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿಯಿಂದ ಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಪ್ರಕಾಶ ಕೆ. ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಹಟ್ಟಿ ಪಟ್ಟಣದಲ್ಲಿ ಚಿನ್ನದ ಗಣಿ ಕಂಪನಿಯ ಕಾರ್ಯನಿರತ ಹಾಗೂ ನಿವೃತ್ತ ನೌಕರರು ಸೇರಿದಂತೆ ಸಾವಿರಾರು ಕುಟುಂಬಗಳು ವಾಸಿಸುತ್ತಿದ್ದಾರೆ. ಕ್ಯಾಂಪ್ ಪ್ರದೇಶದ ಜನರು ಸಹ ವ್ಯಾಪಾರ ವಹಿವಾಟು ಹಾಗೂ ದೈನಂದಿನ ಅಗತ್ಯಗಳಿಗೆ ಹಟ್ಟಿ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಆದರೂ ಪಟ್ಟಣದ ಜನತೆ ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ಚಟುವಟಿಕೆಗಳಿಂದ ಪರಿಸರ ಹಾನಿಯಾಗುತ್ತಿದ್ದು, ಪರಿಸರ ಮಾಲಿನ್ಯದಿಂದ ಜನರು ವಿವಿಧ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಧಾನಮಂತ್ರಿ ಖನಿಜ ಯೋಜನೆ ನಿಯಮಾವಳಿಗಳ ಪ್ರಕಾರ ಗಣಿ ಪೀಡಿತ ಪ್ರದೇಶಗಳಿಗೆ ಕುಡಿವ ನೀರು, ರಸ್ತೆ, ಆರೋಗ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಗಣಿಗಾರಿಕೆ ನಡೆಸುವ ಕಂಪನಿಯೇ ಒದಗಿಸಬೇಕಾದ ಜವಾಬ್ದಾರಿ ಹೊಂದಿದೆ. ಬಸವಸಾಗರ ಜಲಾಶಯದಿಂದ ಚಿನ್ನದ ಗಣಿಗೆ ಪೂರೈಕೆ ಮಾಡುತ್ತಿರುವ ನೀರಿನ ಯೋಜನೆಯನ್ನು ಹಟ್ಟಿ ಪಟ್ಟಣಕ್ಕೂ ವಿಸ್ತರಿಸಬೇಕು. 
ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಹಟ್ಟಿ ಪಟ್ಟಣದ ಸರ್ವ ಸಂಘಟನೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ಊಟಿ ಹಾಗೂ ಹೀರಾಬುದ್ದಿನ್ನಿ ಚಿನ್ನದ ಗಣಿಗಳಿಗೆ ಸಂಚರಿಸುವ ಗಣಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಮಿತಿ ಸದಸ್ಯರಾದ ಶಿವಪುತ್ರಪ್ಪ, ಬಾಬು ನಾಯ್ಕೋಡಿ, ಕೆ.ಶಿವಾನಂದ, ಅಮರಪ್ಪ ಅರಳಳ್ಳಿ, ಸುರೇಶ್‌ಗೌಡ ಗುರಿಕಾರ, ಯಂಕಣ ಯಾದವ್, ಸಣ್ಣ ಯಂಕೋಬ್ ತಾಳಿಕೋಟಿ, ನಿಂಗಣ್ಣ ಹೊಳ್ಯಾಚಿ, ಅಮರೇಶ್ ಕುರ್ಡಿ, ಸುನೀಲ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net