ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯ

ಸಿಂಧನೂರಿನ ಗಂಗಾನಗರದಲ್ಲಿ ಶೌಚಕ್ಕೆ ಜಾಲಿಪೊದೆಗಳೇ ಆಸರೆ
ಸಿಂಧನೂರಿನ ಗಂಗಾನಗರದಲ್ಲಿ ಶೌಚಕ್ಕೆ ಜಾಲಿಪೊದೆಗಳೇ ಆಸರೆ
Published on

ಪ್ರಮುಖ ಮುಖ್ಯಾಂಶಗಳು

  • ನಿತ್ಯ ಮುಜುಗರ ಅನುಭವಿಸುವ ಸ್ಥಿತಿ
  • ಸಿಂಧನೂರಿನ ಗಂಗಾನಗರದಲ್ಲಿ ಶೌಚಕ್ಕೆ ಬಳಸುವ ಖಾಲಿ ನಿವೇಶನ.
ಅಶೋಕ ಬೆನ್ನೂರು
ಸಿಂಧನೂರು: ಇಲ್ಲಿನ ಗಂಗಾನಗರದಲ್ಲಿ ಸಾಮೂಹಿಕ ಶೌಚಗೃಹವಿದ್ದರೂ ಬೀಗ ಹಾಕಲಾಗಿದೆ. ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೂ ಬಹುತೇಕರು ಆಸಕ್ತಿ ತೋರದ ಕಾರಣ ಮಹಿಳೆಯರು ಗಿಡಗಂಟಿಗಳ ಪೊದೆಗಳನ್ನೇ ಅವಲಂಬಿಸಿದ್ದು, ಮುಜುಗರ ಅನುಭವಿಸುತ್ತಿದ್ದಾರೆ.
ನಗರದ 14ನೇ ವಾರ್ಡ್‌ನಲ್ಲಿ 40ನೇ ಉಪಕಾಲುವೆ ದಂಡೆ ಮೇಲೆ ವಾಸಿಸುತ್ತಿರುವ ಹಾಗೂ ಗಂಗಾನಗರದಲ್ಲಿರುವ 50ಕ್ಕೂ ಹೆಚ್ಚು ಕುಟುಂಬಗಳು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಜಾಲಿಪೊದೆಗಳ ಆಸರೆಯಲ್ಲಿ ಶೌಚಕ್ಕೆ ಹೋಗುವಂತಾಗಿದೆ. ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮನೆಗೊಂದು ಶೌಚಗೃಹ ನಿರ್ಮಿಸಿಕೊಂಡು ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ. ಆದರೆ, ಇಲ್ಲಿ ಮಾತ್ರ ಅರ್ಧದಷ್ಟು ಜನರು ವೈಯಕ್ತಿಕ ಶೌಚಗೃಹಗಳನ್ನು ಹೊಂದಿದ್ದು ಬಿಟ್ಟರೆ, ಉಳಿದಂತೆ ಬಹುತೇಕರು ನಿರ್ಮಿಸಿಕೊಂಡಿಲ್ಲ. ನಿತ್ಯ ಶೌಚಗೃಹಕ್ಕೆ ಜಾಲಿಪೊದೆಗಳ ನಡುವೆ ನಿತ್ಯಕರ್ಮ ಮುಗಿಸಿ ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಬೆಳಕು ಹರಿಯುವುದರೊಳಗೆ ಹಾಗೂ ಸಂಜೆ ಹೊತ್ತು ಮುಳುಗಿದ ನಂತರ ಶೌಚಕ್ಕೆ ತೆರಳುವಂತಾಗಿದೆ. ಗಿಡಗಂಟಿಗಳಲ್ಲಿ ವಿಷ ಜಂತುಗಳ ಕಾಟವಿದ್ದರೂ ಮುಜುಗರ ಅನುಭವಿಸುತ್ತ ಬಳಕೆ ಅನಿವಾರ್ಯ ವಾಗಿದೆ. 40ನೇ ಉಪಕಾಲುವೆ, ವಿದ್ಯಾನಗರ ಸೇರಿದಂತೆ ವಿವಿಧ ಖಾಲಿ ಪ್ರದೇಶಗಳನ್ನೇ ಶೌಚಗೃಹವಾಗಿ ಬಳಸುವಂತಾಗಿದೆ.

ಜಾಗದ ಸಮಸ್ಯೆ

ಬಯಲು ಶೌಚಮುಕ್ತ ನಗರ, ಪಟ್ಟಣ, ಗ್ರಾಮಕ್ಕಾಗಿ ಸರ್ಕಾರಗಳು ನಗರಸಭೆ, ಪಪಂ, ಗ್ರಾಪಂಗಳಿಗೆ ವರ್ಷಕ್ಕೆ ಜನಸಂಖ್ಯೆ ಆಧಾರದ ಮೇಲೆ ಶೌಚಗೃಹ ನಿರ್ಮಾಣ ಮಾಡಲು ಪಣ ತೊಟ್ಟಿದ್ದರೂ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಗಂಗಾನಗರವೇ ಸಾಕ್ಷಿಯಾಗಿದೆ. ವೈಯಕ್ತಿಕವಾಗಿ ಶೌಚಗೃಹಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ನಗರಸಭೆ ಮನವರಿಕೆ ಮಾಡಿದ್ದರೂ, ಜಾಗದ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಯಲು ಪ್ರದೇಶವನ್ನು ಶೌಚಕ್ಕೆ ಬಳಸುವುದು ಸಾಮಾನ್ಯವಾಗಿದೆ. ಈಗಲಾದರೂ ಮನೆಗೊಂದು ಶೌಚಗೃಹ ನಿರ್ಮಾಣಕ್ಕೆ ಜನರು ಮುಂದಾಗಬೇಕಿದೆ.

ಗೇಟ್‌ಗೆ ಹಾಕಿದ ಬೀಗ ತೆರೆದಿಲ್ಲ

ಗಂಗಾನಗರದಲ್ಲಿ ಆರೇಳು ವರ್ಷಗಳ ಹಿಂದೆಯೇ ನಗರಸಭೆಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಆದರೆ, ಈವರೆಗೆ ಶೌಚಗೃಹ ಬಳಕೆಯಾಗಿಲ್ಲ. ಬೀಗ ಹಾಕಿದ್ದು ತೆರೆದಿಲ್ಲ. ಸುತ್ತಲಿನ ಜನರು ಕೂಡ ಶೌಚಗೃಹ ಬಳಕೆಗೆ ಮುಂದಾಗಿಲ್ಲ. ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ. ಸುತ್ತಲಿನ ಖಾಲಿ ನಿವೇಶನಗಳ ಜಾಲಿಪೊದೆಗಳೇ ಶೌಚಗೃಹ ಗಳಾಗಿ ಮಾರ್ಪಟ್ಟಿವೆ.
"

ಗಂಗಾನಗರದಲ್ಲಿ ಶೌಚಗೃಹವಿದ್ದರೂ ಬಳಕೆ ಆಗುತ್ತಿಲ್ಲ. ಇದರಿಂದ ಮಹಿಳೆಯರು ಶೌಚಕ್ಕೆ ಬಯಲು ಪ್ರದೇಶವನ್ನು ಅವಲಂಬಿಸಿದ್ದಾರೆ. ನಾವು ಹಲವು ಸಲ ಅರಿವು ಮೂಡಿಸಿದರೂ ಬಹುತೇಕರು ಬಯಲು ಪ್ರದೇಶ ಬಳಕೆ ಮಾಡುತ್ತಿದ್ದಾರೆ. ಹೈಟೆಕ್ ಶೌಚಗೃಹ ನಿರ್ಮಿಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net