ಸಿಂಧನೂರಿನಲ್ಲಿ ಸಿಪಿಐ(ಎಂಎಲ್) ಲಿಬರೇಷನ್ ಮುಖಂಡರು ಪ್ರತಿಭಟನೆ ನಡೆಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ಪ್ರಮುಖರಾದ ಆರ್.ಎಚ್.ಕಲ್ಮಂಗಿ, ಕಂಠೆಪ್ಪ ರೈತನಗರಕ್ಯಾಂಪ್, ವೀರೇಶ ಕರ್ನಿ ಇತರರಿದ್ದರು.
ಸಿಂಧನೂರು: ಪಶ್ಚಿಮ ಬಂಗಾಳದ ಜಿಯಾಗಂಜ್‌ನಲ್ಲಿ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಧ್ವಂಸ ಮಾಡಿದ ಬಿಜೆಪಿ ಪ್ರೇರಿತ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಷನ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲಿ ಸಂವಿಧಾನದ ಆಶಯಗಳಿಗೆ ಎಳ್ಳುನೀರು ಬಿಟ್ಟು, ಸಾಂವಿಧಾನಿಕ ಸಂಸ್ಥೆಗಳನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಅಕ್ರಮಗಳ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿದುಕೊಂಡು ಪ್ರಜಾಪ್ರಭುತ್ವವನ್ನೇ ಕಳ್ಳತನ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಕುತಂತ್ರದಿಂದ ಅಧಿಕಾರ ಹಿಡಿದಿರುವ ಬಿಜೆಪಿಯು ಚುನಾವಣಾ ಆಯೋಗದ ಕೃಪಾಪೋಷಿತ ಅಕ್ರಮ-ಅಪಾರದರ್ಶಕ ಚುನಾವಣೆಗೆ ಜ್ವಲಂತ ಸಾಕ್ಷಿಯಾಗಿದೆ.
2014ರಿಂದಲೂ ಸಾಮ್ರಾಜ್ಯಶಾಹಿ, ಬಂಡವಾಳಶಾಹಿಗಳ ಆರ್ಥಿಕ ಕಾರ್ಯಸೂಚಿಯಂತೆ ಬಿಜೆಪಿ ಕಾರ್ಯನಿರ್ವಹಿಸುತ್ತ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ಅಧಿಕಾರ ಹಿಡಿದಿರುವ ಬಿಜೆಪಿ ಅದನ್ನು ಮರೆಮಾಚಲು ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಪ್ರತಿಮೆಯನ್ನು ಕೆಡವಿರಹುದು. ಆದರೆ, ವಿಚಾರಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ಪ್ರಮುಖರಾದ ಆರ್.ಎಚ್.ಕಲ್ಮಂಗಿ, ಕಂಠೆಪ್ಪ ರೈತನಗರಕ್ಯಾಂಪ್, ವೀರೇಶ ಕರ್ನಿ, ಹನುಮಂತ ಟೈಲರ್ ಬೂದಿಹಾಳಕ್ಯಾಂಪ್, ಹುಸೇನಪ್ಪ ಸುಕಾಲಪೇಟೆ, ಕರಿಯಪ್ಪ ಬೆಳಗುರ್ಕಿ ಇದ್ದರು.