ಬದುಕಿನ ಸಂಕಷ್ಟಕ್ಕೆ ಸಮಾಧಾನವೇ ಪರಿಹಾರ

ಗಬ್ಬೂರಿನ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಮಠದ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ಮಹಾಂತ ಶಿವಯೋಗಿ ಸ್ವಾಮೀಜಿ ಇತರರಿದ್ದರು.
ಗಬ್ಬೂರಿನ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಮಠದ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ಮಹಾಂತ ಶಿವಯೋಗಿ ಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶಿರ್ವಚನ
  • ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಧರ್ಮಸಭೆ
ದೇವದುರ್ಗ: ಹಣ್ಣು ಕೊಡುವ ಮರಕ್ಕೆ ಕಲ್ಲೇಟು, ಜಾಲಿ ಗಿಡಕ್ಕಲ್ಲ. ಮನುಷ್ಯನ ಬದುಕಿಗೆ ಸಂಕಟ ಹೊರತು ಶವಕ್ಕಲ್ಲ. ಇದನ್ನು ಅರಿತು ಸಂಕಟಕ್ಕೆ ಸಮಾಧಾನದಿಂದಲೇ ಪರಿಹಾರ ಪಡೆಯಬೇಕೇ ಹೊರತು ಆತ್ಮಹತ್ಯೆಯಿಂದ ಅಲ್ಲ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು. 
ತಾಲೂಕಿನ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ ಶುಕ್ರವಾರ ಆಶೀರ್ವಚನ ನೀಡಿದರು. ಉಳಿಪೆಟ್ಟು ತಿಂದು ಕಲ್ಲು ಶಿಲೆಯಾಗುತ್ತದೆ. ಸಂಕಟ ತಿಂದ ಬದುಕು ಹಸನಾಗುತ್ತದೆ. ಇದು ದೇವನಾಡಿಸುವ ಬದುಕು. ಇಲ್ಲಿ ನೋವು ನಲಿವು ಎಲ್ಲವೂ ಉಂಟು. ಅದನ್ನು ಬೇವು ಬೆಲ್ಲದಂತೆ ಸವಿಯಬೇಕು. ಕಷ್ಟವಿಲ್ಲದ ಬದುಕಿಗೆ ಅರ್ಥವಿಲ್ಲ. ಅಂಥ ಬದುಕು ಯಾರಿಗೂ ಬರಲ್ಲ. ಶರಣರು ಸಂತರಿಗೂ ಸಂಕಷ್ಟ ತಪ್ಪಿದ್ದಲ್ಲ. ಅದನ್ನು ಗೆದ್ದಾಗ ಮಾತ್ರ ದೇವರ ಪ್ರೀತಿ ಪಡೆಯಲು ಸಾಧ್ಯ ಎಂದರು.
ಕಲ್ಯಾಣ ಕರ್ನಾಟಕ ಶರಣರ ಸಂತರ ನಾಡಾಗಿದ್ದು, ಅವರು ಬದುಕಿನ ಮೌಲ್ಯವನ್ನು ತೋರಿದ್ದಾರೆ. ಮಠ ಮಾನ್ಯಗಳೂ ಭಕ್ತರ ಒಳಿತಿಗಾಗಿ ಶ್ರಮಿಸುತ್ತಿವೆ. ಈ ಭಾಗದಲ್ಲಿ ಬೂದಿ ಬಸವೇಶ್ವರ ಸಂಸ್ಥಾನ ಇರುವುದು ನಿಮ್ಮ ಸೌಭಾಗ್ಯ. ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದೆ. ಹೀಗಾಗಿ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು ಎಂದರು. 

ನಗೆಗಡಲಲ್ಲಿ ತೇಲಾಡಿದ ಭಕ್ತ ಸಮೂಹ

ದೇವದುರ್ಗ: ತಾಲೂಕಿನ ಗಬ್ಬೂರು ಶ್ರೀಬೂದಿಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ನಗೆ ಕಲರವ-2026 ಕಾರ್ಯಕ್ರಮ ಜನರು ನೋವನ್ನು ಮರೆಸಿ ನಗೆಗಡಲಲ್ಲಿ ತೇಲಾಡುವಂತೆ ಮಾಡಿತು. ಸಿನಿಮಾ ಕಲಾವಿದ ಅಪ್ಪಣ್ಣ ಅವರ ಸಿನಿಮಾ ಡೈಲಾಗ್, ಕಾಮಿಡಿ ಪಂಚ್, ಕಚಗುಳಿ ಹಾಡು ಜನರನ್ನು ನಗಿಸಿತು. ಇವರಿಗೆ ಕಲಾವಿದರಾದ ವಾಣಿ ಗೌಡ, ಸೂರಜ್ ಸಾಥ್ ನೀಡಿ ವಿವಿಧ ಕಾಮಿಡಿ ದೃಶ್ಯಗಳನ್ನು ಪ್ರದರ್ಶಿಸಿದರು. ಸಾಂಸಾರಿಕ ಹಾಗೂ ಕೌಟುಂಬಿಕ ಜೋಕ್‌ಗಳು, ಹುಡುಗರು ಹಾಗೂ ಹುಡುಗಿಯರ ನೋವು, ನಲಿವುಗಳು ಹಾಗೂ ಗೃಹಣಿಯರ ಶಕ್ತಿ ಹಾಗೂ ಗಂಡಂದಿರ ಫಜೀತಿ ಬಗ್ಗೆ  ಮಾತನಾಡಿ ಜನರನ್ನು ರಂಜಿಸಿದರು. ಅಲ್ಲದೆ ವಿವಿಧ ನೃತ್ಯ ತಂಡಗಳು ಬೆಂಕಿಯೊಂದಿಗೆ ಡ್ಯಾನ್ಸ್ ಮಾಡಿದ್ದು ರೋಮಾಂಚನ ಮೂಡಿಸಿತು. ಜಾದೂಗಾರ ಮಣಿಕಂಠ ಎಸ್.ಎಂ., ವಿವಿಧ ಮ್ಯಾಜಿಕ್ ಮಾಡಿ ಮಕ್ಕಳು, ಮಹಿಳೆಯರನ್ನು ಅಚ್ಚರಿಗೊಳಿಸಿದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net