ತಾಲೂಕಿನ ಜಾಗಟಗಲ್ ಗ್ರಾಮದ ಶರಣ ರಾಚಯ್ಯಪ್ಪ ತಾತನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ, ಕುಂಭೋತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ವೀರಶೈವ ಧರ್ಮದ ಪಂಚಾಚಾರ್ಯರು ಮಾನವೀಯ ಮೌಲ್ಯಗಳು ಹಾಗೂ ತತ್ವೋಪದೇಶಗಳನ್ನು ಬೋಧಿಸಿ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪಿಸಲು ಶ್ರಮಿಸಿದ್ದಾರೆ. ಶರಣರು, ಸಂತರು ಸಮಾನತೆ, ಶಾಂತಿ ಮತ್ತು ಸಮೃದ್ಧಿಗಾಗಿ ದುಡಿದರು. ಆದರೆ, ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಅಶಾಂತಿ, ಅತೃಪ್ತಿ ಹೆಚ್ಚಾಗುತ್ತಿದ್ದು, ಧರ್ಮವನ್ನು ಜಾತಿಗೆ ಜೋಡಿಸಿ ಸಮಾಜದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅಶಾಂತಿ ದೂರವಾಗಿ ನೆಮ್ಮದಿಯ ಬದುಕು ಸಾಧಿಸಬೇಕಾದರೆ ಪ್ರತಿಯೊಬ್ಬರೂ ಮಾನವ ಧರ್ಮಕ್ಕೆ ಜಯವಾಗಲಿ ಮತ್ತು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ದೊರಕಲಿ ಎಂಬ ಧ್ಯೇಯ ಮೈಗೂಡಿಸಿಕೊಳ್ಳಬೇಕು ಎಂದರು.