ಹದಿನೈದು ತಿಂಗಳ ಬಾಕಿ ವೇತನ ನೀಡಿ

ದೇವದುರ್ಗದ ತಾಪಂ ಕಚೇರಿಯಲ್ಲಿ ಎಸ್‌ಡಿಎ ತಾಯಪ್ಪಗೆ ಘನತ್ಯಾಜ್ಯ ವಿಲೇವಾರಿ ಘಟಕ ನೌಕರರ ಸಂಘ ಮನವಿ ಸಲ್ಲಿಸಿತು.
ದೇವದುರ್ಗದ ತಾಪಂ ಕಚೇರಿಯಲ್ಲಿ ಎಸ್‌ಡಿಎ ತಾಯಪ್ಪಗೆ ಘನತ್ಯಾಜ್ಯ ವಿಲೇವಾರಿ ಘಟಕ ನೌಕರರ ಸಂಘ ಮನವಿ ಸಲ್ಲಿಸಿತು.
Published on
ದೇವದುರ್ಗ: ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿಯಲ್ಲಿ ಎಸ್‌ಡಿಎ ತಾಯಪ್ಪಗೆ ರಾಜ್ಯ ಘನತ್ಯಾಜ್ಯ ವಿಲೇವಾರಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಸೋಮವಾರ ಮನವಿ ಸಲ್ಲಿಸಿತು.
ತಾಲೂಕಿನ 33ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಕಟದಲ್ಲಿ ನೂರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 15-20ತಿಂಗಳಿನಿಂದ ವೇತನವೇ ನೀಡಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಕಸ ವಿಲೇವಾರಿಯಲ್ಲಿ ವಾಹನ ಚಾಲಕರು, ಸಹಾಯಕರು ಕೆಲಸ ಮಾಡುತ್ತಿದ್ದಾರೆ. 
ಅಷ್ಟೇ ಅಲ್ಲದೆ ಗ್ರಾಪಂಯಲ್ಲಿ ಕರ ವಸೂಲಿ ಸೇರಿ ವಿವಿಧ ಕೆಲಸ ಮಾಡಲು ನೌಕರರು ಸಹಾಯ ಮಾಡುತ್ತಿದ್ದಾರೆ. ಒಂದೂವರೆ ವರ್ಷದಿಂದ ವೇತನವಿಲ್ಲದೆ ಕೆಲಸ ಮಾಡುವಂತಾಗಿದೆ. ಈ ಹಿಂದೆ ಪ್ರತಿಭಟನೆ ನಡೆಸಿದಾಗ ವೇತನ ನೀಡುವ ಭರವಸೆ ಕೊಡಲಾಗಿತ್ತು. ಆದರೆ, ಈವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ಕೂಡಲೇ ಎಲ್ಲ ನೌಕರರಿಗೆ ಬಾಕಿ ಇರುವ 15-20ತಿಂಗಳ ವೇತನ ಪಾವತಿ ಮಾಡಬೇಕು. ಈ ಬಗ್ಗೆ ಎಲ್ಲ ಗ್ರಾಪಂ ಪಿಡಿಒಗಳಿಗೆ ಆದೇಶ ನೀಡಬೇಕು. ಅಗತ್ಯ ಸೌಲಭ್ಯ ಕಲ್ಪಿಸಬೇಕು. ನಿರ್ಲಕ್ಷಿಸಿದರೆ ಆ.5ರಿಂದ ತಾಪಂ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 
ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ, ನೌಕರರಾದ ಸುಧಾ, ಕರಿಯಮ್ಮ, ಫರಿದಾಬೇಗಂ, ಆರ್.ಚನ್ನಬಸಮ್ಮ, ತಾಯಮ್ಮ, ಲಲಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net