ಲಿಂಗಸುಗೂರು: ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವುದರೊಂದಿಗೆ ಕಾಂಗ್ರೆಸ್ ಕಟ್ಟಲು ಕೈ ಜೋಡಿಸಬೇಕೆಂದು ಎಂಎಲ್‌ಸಿ ಶರಣಗೌಡ ಪಾಟೀಲ ಬಯ್ಯಪುರ ಹೇಳಿದರು.
ಎಂಎಲ್‌ಸಿ ಕಚೇರಿ ಆವರಣದಲ್ಲಿ ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಪ್ರಮುಖರು, ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು. ರಾಹುಲ್‌ಗಾಂಧಿ ಕೈ ಬಲಪಡಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ನಾವು ನೀವೆಲ್ಲರೂ ತಾಲೂಕಿನವರು ಆಗಿದ್ದು, ಇಲ್ಲೇ ಇದ್ದು ಪಕ್ಷ ಕಟ್ಟುತ್ತಿದ್ದೇವೆ. ಯಾರೋ ಬಂದು ಜಾತ್ರೆ ಮಾಡಿಕೊಂಡು ಹೋದವರಂತೆ ನಾವು ಅಲ್ಲ. ನಾವು ಇಲ್ಲೆ ಹುಟ್ಟಿ ಇಲ್ಲೇ ಬೆಳೆದು ಇಲ್ಲೇ ಇರುತ್ತೇವೆ. ಪಕ್ಷ ಸೇರ್ಪಡೆಯಾದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.
ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಪಾಮಯ್ಯ ಮುರಾರಿ, ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಧರ ಪಾಟೀಲ, ರಾಮಣ್ಣ ಗುತ್ತೇದಾರ, ಅಮರೇಶ ಮೇದಿನಾಪುರ, ಚನ್ನಾರೆಡ್ಡಿ ಬಿರಾದಾರ ಇತರರಿದ್ದರು.