ಲಿಂಗಸುಗೂರು: ತಾಲೂಕಿನಲ್ಲಿ ಮಳೆ ಬಾರದೆ ಖುಷ್ಕಿ ಜಮೀನಿನ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ನಾರಾಯಣಪುರ ಜಲಾಶಯ ಭರ್ತಿಯಾಗುತ್ತಿದ್ದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು, ಕೃಷಿ ಕಾರ್ಮಿಕರು ಖುಷಿಯಲ್ಲಿದ್ದು ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.
ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹ ಎಚ್ಚಳವಾಗುತ್ತಿದ್ದಂತೆ ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ ನಾಲೆಗಳಿಗೆ ನೀರು ಹರಿಸಲಾಗಿದೆ. ನಗರಗಳಿಗೆ ಗುಳೆ ಹೋಗಲು ಸಿದ್ಧತೆ ನಡೆಸಿದ್ದ ಕೃಷಿ ಕಾರ್ಮಿಕರಿಗೆ ಭತ್ತ ನಾಟಿ ಕಾರ್ಯ ವರದಾನವಾಗಿದೆ. ಪುರುಷ ಕಾರ್ಮಿಕರು ಟ್ರಾೃಕ್ಟರ್ ಮೂಲಕ ಭತ್ತ ನಾಟಿಗೆ ಭೂಮಿ ಹದ ಮಾಡಿ ಸಸಿಗಳನ್ನು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದರೆ, ಮಹಿಳಾ ಕಾರ್ಮಿಕರು ಭತ್ತ ನಾಟಿ ಮಾಡುತ್ತಿದ್ದಾರೆ. ಕಾರ್ಮಿಕರು ಬೆಳಗ್ಗೆಯಿಂದ ಸಂಜೆವರೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆ ನೀರನ್ನು ಬಳಸಿಕೊಂಡು ರೋಡಲಬಂಡಾ, ಕಾಳಾಪುರ, ಗುರುಗುಂಟಾ, ಗೌಡೂರು, ರಾಯದುರ್ಗ, ಗುಂತಗೋಳ, ಯರಜಂತಿ, ಬಂಡೇಬಾವಿ, ಮಾಚನೂರು ಹಾಗೂ ರಾಂಪುರ ಏತ ನೀರಾವರಿ ನಾಲೆಗಳ ಮೂಲಕ ನೀರನ್ನು ಬಳಸಿಕೊಂಡು ನವಲಿ, ರಾಂಪುರ, ನರಕಲದಿನ್ನಿ, ಚಿತ್ತಾಪುರ, ಆನೆಹೊಸೂರು, ಬೆಂಡೋಣಿ, ಕುಪ್ಪಿಗುಡ್ಡ ಭಾಗದ ರೈತರು ಭತ್ತ ನಾಟಿ ಮಾಡುವಲ್ಲಿ ನಿರತರಾಗಿದ್ದಾರೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಯೊಂದಿಗೆ ಎನ್‌ಆರ್‌ಬಿಸಿ ಹಾಗೂ ರಾಂಪುರ ಏತ ನೀರಾವರಿ ನಾಲೆಗಳಿಗೆ ನಿತ್ಯ ನೀರು ಹರಿಸಲಾಗುತ್ತಿದೆ. ನದಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ನಾಲೆಗಳಿಗೆ ವಾರಬಂದಿ ಮೂಲಕ ನೀರು ಹರಿಸಲಾಗುತ್ತದೆ. ಆದರೆ, ಕೃಷ್ಣಾ ನದಿಗೆ ನೀರು ಹರಿಸುವುದು ಮುಂದುವರಿದಿರುವುದರಿಂದ ನಾಲೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ.
ನಾರಾಯಣಪುರ ಜಲಾಶಯ ಭರ್ತಿಯಾಗಿರುವುದರಿಂದ ಮುಂಗಾರು ಹಂಗಾಮಿಗೆ ನೀರಿನ ತೊಂದರೆಯಾಗುವುದಿಲ್ಲ. ಇದರಿಂದ ತಾಲೂಕಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.