ಪಾತಾಳಕ್ಕೆ ಕುಸಿಯುತ್ತಿರುವ ಈರುಳ್ಳಿ ಬೆಲೆ ತಮ್ಮ ಬೆಳೆ ತಾವೇ ನಾಶ ಮಾಡಿದ ರೈತರು

lakshmana-gouda
lakshmana-gouda
Published on

ಪ್ರಮುಖ ಮುಖ್ಯಾಂಶಗಳು

  • ಪಾತಾಳಕ್ಕೆ ಕುಸಿಯುತ್ತಿರುವ ಈರುಳ್ಳಿ ಬೆಲೆ
  • ತಮ್ಮ ಬೆಳೆ ತಾವೇ ನಾಶ ಮಾಡಿದ ರೈತರು
  • ಗಾಯದ ಮೇಲೆ ಬರೆ
ರಾಯಚೂರು ಜಿಲ್ಲೆಯಲ್ಲಿ ಕಣ್ಣೀರಿನ ಬೆಳೆ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಸಿಕ್ಕಷ್ಟು ಮಾರಾಟ ಮಾಡಿ ಉಳಿದ ಬೆಳೆಯನ್ನು ಜಮೀನಿನಲ್ಲೇ ನಾಶ ಮಾಡಲು ಮುಂದಾಗಿದ್ದಾರೆ. ನಷ್ಟ ತಗ್ಗಿಸಲು ರೈತರು ಬೆಳೆಯನ್ನು ಭೂಮಿಗೆ ಬಿಡುತ್ತಿದ್ದಾರೆ.
ಈರುಳ್ಳಿ ಬೆಳೆಗಾರರ ಬದುಕು ಅಕ್ಷರಶಃ ಈ ಬಾರಿ ಬೀದಿಗೆ ಬಂದಿದೆ. ಬೆಲೆ ಕುಸಿತದಿಂದಾಗಿ ಈರುಳ್ಳಿ ಕಣ್ಣಲ್ಲಿ ನೀರನ್ನೇ ತರಿಸುತ್ತಿದೆ. ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವ ಈರುಳ್ಳಿ ಬೆಲೆಯಿಂದಾಗಿ ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ.


ಗಾಯದ ಮೇಲೆ ಬರೆ

ಮುಂಗಾರಿನಲ್ಲಿ ಈ ಬಾರಿ ಜಿಲ್ಲೆಯಲ್ಲಿ 753 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿತ್ತು. ಮೊದಲಿಗೆ ಈರುಳ್ಳಿಗೆ ಭಾರೀ ಬೇಡಿಕೆಯಿತ್ತು. ಸಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಕೆಲ ಭಾಗದಲ್ಲಿ ಈರುಳ್ಳಿ ಕೊಳೆತು ರೈತರು ನಷ್ಟಕ್ಕೆ ತುತ್ತಾಗಿದ್ದರು. ರಾಯಚೂರು, ದೇವದುರ್ಗ, ಲಿಂಗಸೂಗೂರು ತಾಲೂಕು ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಬೆಳೆ ಬೆಳೆಯುತ್ತಿದ್ದರು. ಆದರೆ ಈರುಳ್ಳಿಗೆ ಬೆಲೆ ದೊರೆಯದಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಾಶಕ್ಕೆ ಮುಂದಾದ ರೈತರು

ಕಳೆದ ಕೆಲ ವಷರ್ಗಳ ಹಿಂದೆ ಅತ್ಯಧಿಕ ದರಕ್ಕೆ ಮಾರಾಟವಾಗಿ ಮೆರೆದಿದ್ದ ಈರುಳ್ಳಿಯನ್ನು ಇಂದು ಕೇಳುವವರಿಲ್ಲದಂತಾಗಿದೆ . ಬೆಳೆಗೆ ಖರ್ಚು ಮಾಡಿದ ಸಾಗಣೆ ವೆಚ್ಚ, ಕೂಲಿ ಖರ್ಚು ವಾಪಸ್ ಬರಲ್ಲಾವೆಂದು ರೈತರು ತಮ್ಮ ಈರುಳ್ಳಿ ಬೆಳೆಯನ್ನು ತಾವೇ ನಾಶ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ರೂಟವೇಟರ್‌ನಿಂದ ಭೂಮಿಯೊಳಗಿನ ಈರುಳ್ಳಿಗೆಡ್ಡೆಗಳನ್ನು ಹೊರತೆಗೆದು ನಾಶ ಮಾಡುತ್ತಿದ್ದಾರೆ. ಕೂಲಿ,ಗೊಬ್ಬರ, ಕಳೆ ಕೀಟ ನಾಶಕವೆಂದು ಎಕರೆಗೆ 70 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಿದ್ದ ರೈತರು ಈರುಳ್ಳಿ ಕ್ವಿಂಟಾಲ್‌ಗೆ 800 ರೂಪಾಯಿ ಸಿಗುವುದು ಕಷ್ಟವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ 10 ರಿಂದ 15 ರೂಪಾಯಿಗೆ ಕೆ.ಜಿ ಮಾರಾಟವಾಗುತ್ತಿದೆ. ಒಂದು ಬೆಳೆ ಪಡೆದ ರೈತರು ಎರಡನೇ ಬೆಳೆ ತೆಗೆಯಲು ಮನಸ್ಸು ಮಾಡದೆ ತಮ್ಮ ನಷ್ಟ ತಗ್ಗಿಸಲು ಪರ್ಯಾಯ ಬೆಳೆಗೆ ಹೋಗುತ್ತಿದ್ದಾರೆ. ಇದಕ್ಕಾಗಿ ಮತ್ತು ಹಣ ಖರ್ಚು ಮಾಡಿ ತಮ್ಮ ಬೆಳೆಯನ್ನ ನಾಶ ಮಾಡಲಾಡುತ್ತಿದ್ದಾರೆ.

ಕಳೆದ ವರ್ಷ ಈರುಳ್ಳಿಗೆ 2500 ರಿಂದ 3 ಸಾವಿರ ರೂಪಾಯಿಗೆ ಕ್ವಿಂಟಾಲ್ ಮಾರಾಟವಾಗಿತ್ತು, ಈಗ 500 ರಿಂದ 800 ರೂಪಾಯಿಗೆ ಬಂದಿದ್ದು, ಇನ್ನೂ ಇಳಿಕೆಯಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ, ಮಾರಾಟಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ತಂದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಗ್ರಾಹಕರು ಮಾತ್ರ ಕಡಿಮೆ ಬೆಲೆಯಲ್ಲಿ ಈರುಳ್ಳಿ ಸಿಗುತ್ತೆದೆಂದು ನಿಟ್ಟುಸಿರು ಬಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net