ದೇವದುರ್ಗ: ಮಹಾರಾಷ್ಟ್ರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.ಕೃಷ್ಣಾನದಿಗೆ 1.40ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದ್ದು, ತಾಲೂಕಿನ ನದಿ ಪಾತ್ರದಲ್ಲಿ ನೆರೆ ಆತಂಕ ಮನೆ ಮಾಡಿದೆ.
ನಾರಾಯಣಪುರ ಜಲಾಶಯಕ್ಕೆ ಭಾನುವಾರ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಡ್ಯಾಂನಿಂದ 29 ಕ್ರಸ್ಟ್ ಗೇಟ್‌ಗಳ ಮೂಲಕ 1,40,880 ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ.
ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಅರಸಿಣಿಗಿ ಗ್ರಾಮದ ಅಣೆಮಲ್ಲೇಶ್ವರ ದೇವಸ್ಥಾನದ ಸುತ್ತ ನೀರುಬಂದಿದೆ. ವೀರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಸ್ಥಾನ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ತಾಗಿದೆ. ಕೊಪ್ಪರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಗೂಗಲ್ ಶ್ರೀ ಅಲ್ಲಮಪ್ರಭು ದೇವಸ್ಥಾನದ ಮೆಟ್ಟಿಲುವರೆಗೆ ನೀರುಬಂದಿದೆ. ಅಂಜಳದ ಶ್ರೀ ಬಸವೇಶ್ವರ ದೇವಸ್ಥಾನ ಸಮೀಪ ನೀರು ಆವರಿಸಿದೆ.
ನದಿದಂಡೆ ಜಮೀನಿನ ಹತ್ತಿರ ನೀರು ಬಂದಿದ್ದು 1.5 ಲಕ್ಷ ಕ್ಯೂಸೆಕ್ ನೀರು ಬಮದರೆ ಜಮೀನಿಗೆ ನುಗ್ಗುವ ಆತಂಕವಿದೆ. ತಾಲೂಕು ಆಡಳಿತದಿಂದ ನದಿದಂಡೆಯಲ್ಲಿ ಡಂಗೂರ ಸಾರಿದ್ದು ಅಧಿಕಾರಗಳು ಹಾಗೂ ಪೊಲೀಸರನ್ನು ನಿಯೋಜಿಸಿ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ರೈತರು ನದಿಗೆ ಇಳಿಸಿರುವ ಪಂಪ್‌ಸೆಟ್, ಪೈಪ್, ವಿದ್ಯುತ್ ವೈರ್ ತೆರವು ಮಾಡುತ್ತಿದ್ದಾರೆ. ಬರದ ನಡುವೆ ಬೆಳೆದ ಬೆಳೆಗಳು ನೆರೆಗೆ ಸಿಲುಕುವ ಭಯ ನದಿದಂಡೆ ರೈತರಲ್ಲಿ ಮನೆಮಾಡಿದೆ.